“ಮುಳುಗು, ಮುಳುಗು ಮನವೇ ಸೌಂದರ್ಯ ಸಾಗರದಲ್ಲಿ ಮುಳುಗು ಸಮುದ್ರಕ್ಕಿಂತಲೂ ಅಗಾಧವಾದ ಆತ್ಮ ಸಮುದ್ರದಲ್ಲಿ ಮುಳುಗು, ಪ್ರೇಮರತ್ನ ಲಭಿಸುತ್ತದೆ. ಬೃಂದಾವನ ನಿನ್ನ ಹೃದಯದಲ್ಲಿದೆ. ವಿಶ್ವಪ್ರೇಮಿತ ಪುರುಷನು ಅಲ್ಲಿ ವೇಣುಗಾನ ಮಾಡುತ್ತಿದ್ದಾನೆ. ಹೋಗಿಕಾಣು, ಹುಡುಕಿದರೆ ದೊರಕುವನು. ಅಲ್ಲಿ ಜ್ಞಾನದೀಪ ಉರಿಯುತ್ತದೆ”. (ಶ್ರೀಕೃಷ್ಣಪರಮಹಂಸ-ಕುವೆಂಪು ಪು.ಸಂ.190)
ಸಂಪೂರ್ಣವಾಗಿ ಯಾವುದೇ ಒಂದು ಧರ್ಮದ ಸಾರವ ತಿಳಿಯದೇ ಧಾರ್ಮಿಕ ಮೌಢ್ಯಗಳ ಇಲ್ಲವೇ ಕೆಲವು ರಾಜಕಾರಣದ ಅಥವಾ ಕಿಡಿಗೇಡಿಗಳ ಕುತಂತ್ರತೆಗೆ ಬಲಿಯಾಗಿ ಕೋಮುಗಲಭೆಗೆ ಧುಮುಕುವ ತರುಣರು ಸಾವಿರಾರು…! ಬಹು ಧರ್ಮೀಯ ಬಹುಸಂಸ್ಕøತಿಯ ಬೀಡಾದ ಭಾರತ ದೇಶದಲ್ಲಿ ಇಂತಹ ಅವಘಡಗಳು ಘಟಿಸುತ್ತಿರುವುದು ಭವಿಷ್ಯದ ದುರಂತಕ್ಕೆ ಮುನ್ನುಡಿಯೇ ಸರಿ.
“ಮಾನವ ಭ್ರಾತೃತ್ವ ಕುರಿತು ಸುಮ್ಮನೇ ಮಾತನಾಡಿದರಾಗದು, ಅದನ್ನು ಸಾಕ್ಷಾತ್ಕಾರ ಮಾಡಿಕೋ. ಆ ವಾದ ಈ ವಾದಗಳನ್ನು ಕುರಿತು ಬರಿದೇ ವಾದಿಸಿ, ಕಾಲ ಕಳೆÀಯಬೇಡ. ಸತ್ಯವಿರುವುದೊಂದೆ. ಹೊಳೆಗಳೆಲ್ಲಾ ಕಡಲಿಗೆ ಹರಿಯುತ್ತವೆ. ನೀನು ಹರಿ. ಇತರರನ್ನು ಹರಿಯಗೊಡು! ಹರಿಯುವ ನೀರೆಲ್ಲಾ ಒಂದಾಗಿರಲು ಎಲ್ಲವೂ ಕಡಲಿಗೆ ಹೋಗಿ ಬೀಳಲಿ”2 (ಶ್ರೀಕೃಷ್ಣಪರಮಹಂಸ-ಕುವೆಂಪು ಪು.ಸಂ. 190)
ಬಹುಶಃ ಈ ಮೇಲಿನ ಮಾತುಗಳನ್ನು ಮನದಾಳಕ್ಕಿಳಿಸಿ, ಅಳವಡಿಸಿಕೊಂಡದ್ದೇ ಆದಲ್ಲಿ ಶಾಂತಿಪ್ರಿಯ ಜಗತ್ತು ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ.
ಭಗವದ್ಗೀತೆ, ಖುರಾನ್, ಬೈಬಲ್, ತ್ರಿಪಿಟಕಗಳು ಇನ್ನೂ ಇತರೆ ಧಾರ್ಮಿಕ ಗ್ರಂಥಗಳೆಲ್ಲವೂ ಮನಷ್ಯನ ಒಳಿತನ್ನೇ ಅವಲಂಬಿಸಿದಂತವು, ಮಾನವೀಯ ಮೌಲ್ಯಗಳನ್ನು ಬಿತ್ತುವಂತವುಗಳಾಗಿವೆ. ಭಾರತವೆಂದರೆ ಬಹುಧರ್ಮೀಯ ನೆಲೆವಿಡೆಂದು ಜಗತ್ತೇ ಅಂತಿರುವಾಗ ನಿತ್ಯ ನಡೆಯುವ ಕೋಮು ಗಲಭೆಗಳು ನಾಚಿಕೆಗೇಡಿತನ ತಂದೊಡ್ಡುವಂತಹ ಸನ್ನಿವೇಶಗಳಾಗಿವೆ.
ಯಥಾನದ್ಯಃ ಸ್ಯಂದಮಾನಾಃ ಸಮುದ್ರೇ
ಅಸ್ತಂ ಗಚ್ಛಂತಿ ನಾಮರೂಪೇ ವಿಹಾಯ |
ತಥಾ ವಿದ್ವಾನ್ ನಾಮರೂಪಾತ್ ವಿಮುಕ್ತಃ
ಪರಾತ್ ಪರಂ ಪುರುಷಂ ಉಪೈತಿ ದಿವ್ಯಂ || 3 (ಮುಂಡಕೋಪನಿಷತ್)
ಹರಿಯುವ ನದಿಗಳು ಹೇಗೆ ತಮ್ಮ ಹೆಸರು ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೊ ಹಾಗೆಯೇ ಜ್ಞಾನಿಯಾದ ಮನುಷ್ಯನು ನಾಮರೂಪಗಳಿಂದ ಬಿಡುಗಡೆ ಪಡೆದು ಪರಾಥ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ.
ಇದು ತುಂಬಾ ಉದಾತ್ತವಾದ ಭಾವನೆ; ಮನುಕುಲದ ಮುಂದಿರುವ ಬಹುದೊಡ್ಡ ಕಲ್ಪನೆ. ಇದು ಅಮರ ಆದರ್ಶ, ಅತ್ಯದ್ಭುತವಾದಂತಹ ವಿಚಾರ ಲಹರಿ. ಈ ಅಮೂಲ್ಯ ತತ್ವವನ್ನು ಜಗತ್ತಿಗೆ ಬಹುಶಃ ಮೊಟ್ಟಮೊದಲಿಗೆ ಕೊಟ್ಟವರೆಂದರೆ ಉಪನಿಷತ್‍ನ ಋಷಿಗಳು.
ನಿತ್ಯ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ನಿತ್ಯ ಕಿತ್ತಾಡುವ, ಬಡಿದಾಡಿ ರಕ್ತಸಿಕ್ತರಾಗುವ ನಾವು ದೇವರೆಂದರೆ ಏನು? ಯಾರು? ಎಂಬುದನ್ನು ಮೊದಲು ಅರಿಯಬೇಕು.
ಸರ್ವತಃ ಪಾಣಿಪಾದಂ ತತ್
ಸರ್ವತೋ ಷೆ ಶಿರೋಮುಖಮ್ |
ಸರ್ವತಃ ಶ್ರುತಿ ಮಲ್ಲೋಕೇ
ಸರ್ವ ಮಾವೃತ್ಯ ತಿಷ್ಠತಿ || (ಭಗವದ್ಗೀತಾ 6-13, ಶ್ಲೋ-14)
ಅವನ ಕೈಗಳು ಮತ್ತು ಕಾಲುಗಳು, ಅವನ ಕಣ್ಣುಗಳು, ತಲೆಗಳು ಮತ್ತು ಮುಖಗಳು ಎಲ್ಲೆಲ್ಲೂ ಇವೆ. ಅವನಿಗೆ ಎಲ್ಲೆಲ್ಲೂ ಕಿವಿಗಳುಂಟು. ಹೀಗೆ ಪರಮಾತ್ಮನು ಸರ್ವವ್ಯಾಪಿ ಯಾಗಿದ್ದಾನೆ. ಯಾರು ಸರಿಯಾಗಿ ಆಯಾ ಧರ್ಮಗಳನ್ನು ಅರ್ಥಮಾಡಿ ಕೊಳ್ಳುವುದಿಲ್ಲವೋ ಅಂತವರಿಂದ ಧಾರ್ಮಿಕ ಮೌಢ್ಯಗಳು ಸೃಷ್ಠಿಯಾಗುತ್ತವೆ. ಇವರೇ ಕೋಮುಗಲಭೆಗಳ, ಭಯೋತ್ಪಾದನೆಗಳ ಭವಿಷ್ಯದ ನಾಯಕರಾಗುತ್ತಾರೆ. ಇವರ ಅಂತರಾತ್ಮದಲ್ಲಿ ಯಾವುದೇ ಮಾನವೀಯ ಮೌಲ್ಯಗಳು ಸುಳಿದಾಡದೆ ಬ್ರಮನಿರಸನರಾಗಿ, ಪ್ರೇತಾತ್ಮರಾಗಿ ಬದುಕು ಸಾಗಿಸುತ್ತಾರೆ. ಕುರೂಪ ರೂಪದ ಇವರ ಹೃದಯಕ್ಕೆ ನ್ಯಾಯ ನೀತಿ ಕರುಣೆ ಎಂಬ ಪದಗಳು ನೂರಾರುಮೈಲಿ. ಇಂತವರನ್ನರಿತೆ ಬಸವಣ್ಣನವರು ಹೀಗೇಳಿರಬಹುದು.
ಇವನಾರವ, ಇವನಾರವ
ಇವನಾರವ ಎಂದೆನಿಸದಿರಯ್ಯಾ
ಇವನಮ್ಮವ ಇವನಮ್ಮವ
ಇವನಮ್ಮವ ನೆಂದಿನಿಸಯ್ಯಾ
ನಮ್ಮ ಕೂಡಲಸಂಗನ ಮನೆಯ ಮಗನೆಂದಿನಿಸಯ್ಯಾ ||
ಈ ಮೇಲಿನ ವಚನವು ಪ್ರತಿಯೊಂದು ಧರ್ಮಕ್ಕೆ ಅನ್ವಯವಾಗುತ್ತದೆ. ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿದು ಪಾತಾಳ ಸೇರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮನುಷ್ಯರೆಲ್ಲರೂ ತಲ್ಲಣ ಹಾಗೂ ಆತಂಕಗಳ ನಡುವೆ ಜೀವಿಸಬೇಕಾದ ಪರಿಸ್ಥಿತಿ ಉಂಟಾಗಿ+ದೆ. ಭಾರತದಂತಹ ಬಹುರೂಪ, ಬಹುಸಂಸ್ಕøತಿಯ ಸಮಾಜವಿರುವ ದೇಶದಲ್ಲಿ ಇಂದು ಸಂಸ್ಕøತಿಯ ಮೂಲ ಉದ್ದೇಶಗಳು ಮರೆಯಾಗಿ, ಅವುಗಳ ಜಾಗದಲ್ಲಿ ಅಪವ್ಯಾಖ್ಯಾನಗಳು ಮನುಷ್ಯನನ್ನು ನಿಯಂತ್ರಿಸುತ್ತಿವೆ. ಮತ ಧರ್ಮಗಳ ಕೋಟೆಗಳ ಒಳಗೆ ಮನುಷ್ಯ ತನ್ನನ್ನು ತಾನೇ ಬಂಧನಕ್ಕೊಳಪಡಿಸಿಕೊಂಡಿದ್ದಾನೆ. ಸಾಮಾಜಿಕವಾಗಿ ಆರ್ಥಿಕವಾಗಿ, ಸಾಂಸ್ಕøತಿಕವಾಗಿ ನಾವೆಲ್ಲರೂ ವಿಘಟಿತರಾಗುತ್ತಿದ್ದೇವೆ.
ಕುಲಬಿಲದಲ್ಲಿ ಬಿದ್ದು ಒದ್ದಾಡುವ ಮೂಢರಿಗೆ ಬಸವಣ್ಣನವರ ವಚನ ಅರ್ಥವಾದರೆ ಬಹುಶಃ ಸತ್ಪ್ರಜೆಗಳಾಗಬಹುದು.
ದೇವ, ನಿಮ್ಮ ಪೂಜಿಸಿ
ಚೆನ್ನನ ಕುಲ ಚೆನ್ನಾಯಿತ್ತು |
ದೇವ, ನಿಮ್ಮ ಪೂಜಿಸಿ
ದಾಸನ ಕುಲ ದೇಸಿವಡೆದಿತ್ತು |
ದೇವ, ನಿಮ್ಮಡಿಗೆರಗಿ
ಮಡಿವಾಳ ಮಾಚಯ್ಯ ನಿಮ್ಮಡಿಯಾದ !
ನೀನೊಲಿದ ಕುಲಕ್ಕೆ
ನೀನೊಲ್ಲದ ಹೊಲೆಗೆ ಮೇರೆಯುಂಟೇ ದೇವ?
ಶ್ವಪ ಚೋಪಿ ಮುನಿಶ್ರೇಷ್ಠಃ
ಯಸ್ತು ಲಿಂಗರ್ಚನೇರತಃ |
ಲಿಂಗಾರ್ಚನ ವಿಹೀನೋಪಿ
ಬ್ರಾಹ್ಮಣಃ ಶ್ವ ಪಚಾಧಮಃ ||
ಎಂದುದಾಗಿ ಜಾತಿ-ವಿಜಾತಿಯಾದರೇನು
ಅಜಾತರಿಗೆ ಶರಣೆಂದೆನ್ನದವರು?
ಆತನೇ ಹೊಲೆಯ ಕೂಡಲಸಂಗಮದೇವ.
(ವಚನ ವಾಹಿನಿ ಪು.ಸಂ.125)
ದೇವ ಸರ್ವ ಜಾತಿಗೂ, ಸರ್ವ ಧರ್ಮಕ್ಕೂ ಒಬ್ಬನೇ ಅವನು ಸರ್ವವ್ಯಾಪಿ, ಅಗೋಚರ ಶಕ್ತಿ.
ಆದರಿಂದು ಧರ್ಮಗಳಿಗೆ ಮಸಿಬಳಿಯುವ ಕಾರ್ಯಗಳು ನಿತ್ಯ ಜರುಗುತ್ತಿವೆ. ಜಾತಿ-ಧರ್ಮಗಳ ಜಂಜಾಟದ ಜಾಲದಲ್ಲಿ ಸಿಲುಕಿ ಮಾನವ ಇಂದು ತೊಳಲಾಡುತ್ತಿದ್ದಾನೆ.
ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ
ಜಾತಿ ವಿಜಾತಿಯೆನ್ನಬೇಡ ದೇವನೊಲಿ |
ದಾತ ನೇ ಜಾತ ಸರ್ವಜ್ಞ |
ಸರ್ವಜ್ಞನ ಈ ಅಮೃತವಾಣಿ ವಿಶ್ವ ಸಂದೇಶವಾಗಿದೆ. ಅವರ ಒಂದೊಂದು ತ್ರಿಪದಿಯು ಅದ್ಭುತ ಮಾನವೀಯ ಮೌಲ್ಯಗಳು.
ಇನ್ನೂ ಮುಂದುವರಿದಂತೆ ಭಗವಾನ್ ಎನ್ನುವ ಒಬ್ಬ ಲೇಖಕ ಹೀಗೆ ಹೇಳುತ್ತಾನೆ”. ಎಲ್ಲಾ ಮೂಢನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮ ಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರೂ ಇಲ್ಲ ! ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು, ಕೊನೆಗೆ ದೇವರನ್ನೇ ಧ್ವಂಸ ಮಾಡಿ ನಾನೆಂಬುದೇ ದೇವರು ಬೇರಾರೂ ಇಲ್ಲ. ತತ್ವ ಜ್ಞಾನಿಗಳೇ ಎದ್ದು ನಿಲ್ಲಿ - ಭಯ ಬೇಡ, ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು. ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ …. ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಟಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ. [ಶಂಕರಾಚಾರ್ಯ ಮತ್ತು ಪ್ರತಿಗಾಮಿತನ - ಭಗವಾನ್ “: ಪು.ಸಂ. 60]
ಆದರೆ ಇವನ್ನೆಲ್ಲಾ ಧಿಕ್ಕರಿಸುವ, ಮಹಾತ್ಮರ ಮೌಲ್ಯಗಳನ್ನು ಗಾಳಿಗೆ ತೂರುವ ನಾವು ಪ್ರತಿಭಟನೆ, ಚಳುವಳಿಗಳೆಂಬ ಹಿಂಸಾಚಾರಕ್ಕೆ ಕೈ ಹಾಕಿ ಅದೆಷ್ಟು ಜೀವಗಳ ಬಲಿಗೈದಿರುವೆವು. ಇಲ್ಲಿ ದುಃಖ ಅನುಭವಿಸುವ, ಕಷ್ಟ-ನೋವು, ನಷ್ಟಗಳಿಗೆ ತುತ್ತಾಗುವರು ಮಾತ್ರ ಅಮಾಯಕ ಪ್ರಜೆಗಳೇ ಹೊರತು ಮುಖವಾಡ ಧರಿಸಿದ ಗೂಂಡಾಗಳಲ್ಲ! ಅಮಾಯಕ ಹಿಂದೂವಾಗಿರಲಿ, ಮುಸ್ಲಿಂ ಆಗಿರಲಿ; ಕ್ರೈಸ್ತನಾಗಿರಲಿ, ಬೌದ್ಧನಾಗಿರಲಿ, ಜೈನನಾಗಿರಲೀ, ಇಲ್ಲವೇ ಸಿಖ್ ಆಗಿರಲೀ, ಎಲ್ಲರೂ ಒಂದೇ ಎಂದು ಭಾವಿಸಿ ಸಹೋದರತ್ವದಿಂದ ಸಾಗಿದಾಗ ಮಾತ್ರ ಶಾಂತಿ, ನೆಮ್ಮದಿ ಸಾಧ್ಯ. ಇದ್ಯಾವುದಕ್ಕೂ ಕಿವಿಗೊಡದೇ ಮನುಷ್ಯಪೀಳಿಗೆ ಇಂದು ತನ್ನ ಮಹತ್ವಾಕಾಂಕ್ಷೆಯನ್ನು ಮರೆತು ಮೌಲ್ಯಗಳ ಅಧಃಪತನಕ್ಕೆ ನಾಂದಿ ಹಾಡುತ್ತಿದೆ. ಇಂತಹ ಯಾವುದೇ ಸನ್ನಿವೇಶಗಳು ಎದುರಾದಾಗಲೆಲ್ಲಾ ಕರುಣೆ, ಪ್ರೀತಿ, ಸಹನೆ ಮತ್ತು ಸಮಾನತೆಗಳಿಂದ ಮುಪ್ಪರಿಗೊಂಡ ಮಾನವೀಯ ಮೌಲ್ಯಗಳು ಎಂದಿಗೂ ಈ ಜಗತ್ತನ್ನು ಕಾಪಾಡುತ್ತಾ ಬಂದಿದೆ. ಇಂದೂ ಕೂಡ ಈ ಮಾನವೀಯ ಮೌಲ್ಯಗಳೇ ನಮ್ಮ ವಿಘಟನೆ ತಡೆದು, ಮತ್ತೆ ಬೆಳಕಿನೆಡೆಗೆ ನಮ್ಮನ್ನೆಲ್ಲಾ ಕರೆದೊಯ್ಯಬಲ್ಲ ಸಮರ್ಥ ರಕ್ಷಕವಾಗಿವೆ.
ಬಹುಮುಖ್ಯವಾಗಿ ರಾಜಕಾರಣಿಗಳು, ರಾಜಕೀಯ ಪಕ್ಷಗಳು ತಮ್ಮತನದ ಓಟ್ ಬ್ಯಾಂಕಿನ ರಾಜಕಿಯ ಮಾಡದೇ ಪ್ರಜೆಗಳ ಹಿತಾಸಕ್ತಿಯ ಬಗ್ಗೆ ಚಿಂತಿಸಿ, ತಮ್ಮ ಮುಖವಾಡಗಳನ್ನು ತೆಗೆದು ಹೊರ ಜಗತ್ತಿಗೆ ಬರಬೇಕಿದೆ.
ನಮ್ಮ ಮಾತೃಭೂಮಿಯಲ್ಲಿ ಎಲ್ಲಾ ಧರ್ಮಗಳೂ ಮಿಲನವಾಗಬೇಕಿದೆ. ವೇದಾಂತದ ಮಿದುಳು, ಇಸ್ಲಾಮಿನ ದೇಹ, ಕ್ರೈಸ್ತನ ಆದರ್ಶ; ಸಿದ್ಧಾರ್ಥನ ತತ್ವಗಳು; ಸಿಖ್ ರ ಕೆಚ್ಚೆದೆ; ಜಿನನ ಬೆಳಕು ಇವೆಲ್ಲವುಗಳು ಪ್ರತಿಯೊಬ್ಬನಲ್ಲಿಯೂ ಸಮ್ಮಿಲನವಾಗಬೇಕಿದೆ. ಇದೊಂದೇ ನಮ್ಮ ಪುರೋಗಮನಕ್ಕೆ ಸುಗಮ.
ಪ್ರತಿಯೊಬ್ಬ ಪ್ರಜೆಯು ಜಾತಿ-ವಿಜಾತಿ, ಧರ್ಮ, ಪರಧರ್ಮ, ಮೇಲು-ಕೀಳುಗಳೆನಿಸದೇ ಸಹೋದರತ್ವ, ಸಹಬಾಳ್ವೆ, ಅಳವಡಿಸಿಕೊಂಡು ಜೀವನ ಸಾಗಿಸಬೇಕಿದೆ. ಜಾತ್ಯಾತೀತ, ಧರ್ಮಾತೀತ ರಾಷ್ಟ್ರ ರೂಪುಗೊಳ್ಳಬೇಕಿದೆ. ಇಲ್ಲವಾದರೆ ಜಾತಿ-ಧರ್ಮಗಳ ಡೊಳ್ಳ್ಳುರಿಯಲ್ಲೆ ಬೆಂದು ವಿನಾಶವಾಗಬೇಕಾಗುತ್ತದೆ. ಭವಿಷ್ಯದ ಪೀಳಿಗೆಗೆ ಇದು ಎಚ್ಚರಿಕೆಯ ಕರೆಘಂಟೆಯೂ ಹೌದು!
ಕೊಟ್ರೇಶ್ ಎಸ್ ಉಪ್ಪಾರ್
ಆಲೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ