ಮಂಗಳವಾರ, ಜುಲೈ 1, 2014

ಕೊಟ್ರೇಶ್ ಎಸ್.ಉಪ್ಪಾರರ ವೈಜ್ಞಾನಿಕ ಕೌತುಕಗಳು - ಡಾ|| ಬಿ.ಸಿ ದೊಡ್ಡೇಗೌಡ


ನಮ್ಮ ನಿತ್ಯ ಜೀವನದಲ್ಲಿ ಹಲವು ಸಂಗತಿಗಳು ನಮ್ಮ ಕುತೂಹಲವನ್ನು ಕೆರಳಿಸುತ್ತವೆ, ನಮ್ಮಲ್ಲಿ ಕೌತುಕಕ್ಕೆ ಕಾರಣವಾಗುತ್ತವೆ ಹಾಗೂ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಆದರೂ ನಮ್ಮ ದೈನಂದಿನ ಜಂಜಡಗಳ ನಡುವೆ ಅವುಗಳಿಗೆ ಉತ್ತರ ಹುಡುಕದೆ ಅವುಗಳನ್ನು ನಿರ್ಲಕ್ಷಿಸಬಹುದು ಅಥವಾ ಮರೆತು ಬಿಡಬಹುದು. ಆದರೂ ಇಂತಹ ಪ್ರಶ್ನೆಗಳಿಗೆ ಉತ್ತರ ದೊರೆತಾಗ ನಮ್ಮಲ್ಲಿ ಒಂದು ಸಂತೃಪ್ತ ಭಾವನೆ ಮೂಡುತ್ತದೆ. ಹೊಸ ಹರಿವು ನಮ್ಮ ವೈಚಾರಿಕ ಬೆಳವಣಿಗೆಗೆ ಕಾರಣವಾಗುತ್ತದೆ. 
ನಾವು ಪ್ರತಿನಿತ್ಯ ನಮಗರಿವಿಲ್ಲದೆ ವೈಜ್ಞಾನಿಕವಾದ ಹಲವು ಸಂಗತಿಗಳ ನಡುವೆ ವ್ಯವಹರಿಸುತ್ತಾ ಇರುತ್ತೇವೆ. ನಮ್ಮ ಹೆಚ್ಚಿನ ಚಟುವಟಿಕೆಗಳಲ್ಲಿ ವಿಜ್ಞಾನ ಹಾಸುಹೊಕ್ಕಾಗಿದ್ದರೂ ಅವುಗಳನ್ನು ನಿಖರವಾಗಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡದಿರಬಹುದು. ನಿತ್ಯ ಜೀವನದಲ್ಲಿ ವಿಜ್ಞಾನದ ಮಹತ್ವ ನಮಗೆ ಅರಿವಾಗದೇ ಇರಬಹುದು. ನಮ್ಮ ಮಕ್ಕಳು ನಮ್ಮನ್ನು ಅಕಸ್ಮಾತ್ತಾಗಿ ಪ್ರಶ್ನಿಸಿದಾಗ ಉತ್ತರಿಸಲು ಹಿಂದೆ ಮುಂದೆ ನೋಡುವ ಪ್ರಸಂಗಗಳು ಉಂಟಾಗಬಹುದು. ಜನಪ್ರಿಯ ವಿಜ್ಞಾನ ನಮ್ಮೆಲ್ಲ ಪ್ರಶ್ನೆಗಳಿಗೆ, ಸಂದೇಹಗಳಿಗೆ, ಕುತೂಹಲಗಳಿಗೆ ಉತ್ತರವಾಗಿ ನಮಗೆ ಹತ್ತು ಹಲವು ಬಗೆಯ ಮಾಹಿತಿಯನ್ನು ಒದಗಿಸುತ್ತಾ ಬಂದಿದೆ. ಸಾಮಜಿಕ ಕಳಕಳಿ ಇರುವ ವ್ಯಕ್ತಿಗಳು ಇಂತಹ ಜನಪ್ರಿಯ ವಿಜ್ಞಾನದ ಸರಕನ್ನು ನಮಗೆ ಒದಗಿಸುತ್ತಾ ಬಂದಿದ್ದಾರೆ. 
ಶ್ರೀ ಕೊಟ್ರೇಶ್ ಎಸ್.ಉಪ್ಪಾರ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಪ್ರವೃತ್ತಿಯಲ್ಲಿ ಒಬ್ಬ ಉದಯೋನ್ಮುಖ ಲೇಖಕರಾಗಿ ನಮಗೆ ಕಾಣಿಸುತ್ತಾರೆ. ಪ್ರಸ್ತುತ ಈ ಕೃತಿಯಲ್ಲಿ ವೈಜ್ಞಾನಿಕ ವಿಚಾರಗಳನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಹೊರತರುತ್ತಿರುವ “ವೈಜ್ಞಾನಿಕ ಕೌತುಕಗಳು” ಕೃತಿ ಜನಪ್ರಿಯ ವಿಜ್ಞಾನದ ಒಂದು ಮಾದರಿಯಾಗಿದೆ. ಈ ಸಂಗ್ರಹದಲ್ಲಿರುವ ಹತ್ತು ಹಲವು ವಿಷಯಗಳು ನಮ್ಮ ನಿತ್ಯ ಜೀವನದ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಕಂಡುಬರುತ್ತವೆ. ನೂರೆಂಟು ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿರುವ ಉಪ್ಪಾರರ ಪ್ರಯತ್ನ ಶ್ಲಾಘನೀಯವಾದುದು.  ಬಹಳ ಮುಖ್ಯವಾಗಿ ಈ ಸಂಗ್ರಹದಲ್ಲಿನ ವಿಷಯಗಳು ಓದುವ ಮಕ್ಕಳ ಹಲವು ಬಗೆಯ ಪ್ರಶ್ನೆಗಳಿಗೆ ಉತ್ತರವಾಗಿ ದೊರಕಬಲ್ಲವು. ಕೆಲವು ವಿಷಯಗಳಿಗೆ ಇನ್ನಷ್ಟು ವಿವರಣೆ ಇದ್ದರೆ, ವಿಷಯದ ನಿರೂಪಣೆಯನ್ನು ಇನ್ನೊಂದಿಷ್ಟು ಸರಳಗೊಳಿಸಿದ್ದರೆ ಇಲ್ಲಿಯ ಲೇಖನಗಳು ಇನ್ನಷ್ಟು ಪುಷ್ಠಿಗೊಳ್ಳುತ್ತಿದ್ದವು ಎಂದೆನಿಸುತ್ತದೆ. ಆದರೂ ಇಲ್ಲಿನ ವಿಷಯಗಳು ವೈವಿಧ್ಯತೆಯಿಂದ ಕೂಡಿದ್ದು ಮತ್ತು ವಿಷಯದ ಸಂಗ್ರಹ ಕಾರ್ಯ ಮೆಚ್ಚತಕ್ಕದ್ದು. ಇವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುವೆ.

ಡಾ|| ಬಿ.ಸಿ ದೊಡ್ಡೇಗೌಡ
   ಉಪನ್ಯಾಸಕರು
  ಡಯಟ್, ಹಾಸನ
  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ