ಸೋಮವಾರ, ಜುಲೈ 21, 2014

“ಅಡುಗೆ ಮನೆಗೊಂದು ಕೈಪಿಡಿ-ವಿಶೇಷ ಪಾಕ ವೈವಿಧ್ಯ” - ಕೊಟ್ರೇಶ್ ಎಸ್. ಉಪ್ಪಾರ್



ಸಾಹಿತ್ಯ ಎಂದರೆ ನಮಗೆ ಥಟ್ ಅಂತ ಹೊಳೆಯುವುದು ಕಾವ್ಯ, ಕಥೆ, ನಾಟಕ, ಕಾದಂಬರಿ ಮತ್ತು ಅದರಾಚೆ ಬಿಡಿ ಬರಹಗಳು ಈಗೀಗ ವಿಜ್ಞಾನ, ಪರಿಸರ, ಕುರಿತ ಸಾಹಿತ್ಯ ರಚನೆಯಾಗುತ್ತಿದೆ. ಆದರೆ ಪುರಾತನ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಪಾಕಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ.
ಭಾರತೀಯ ಪರಂಪರೆಯಲ್ಲಿ ನಳಪಾಕ ಮತ್ತು ಭೀಮ ಪಾಕ ಚಾರಿತ್ರಾರ್ಹವಾಗಿದೆ. ಗತಕಾಲದ ಇತಿಹಾಸ, ಸಂಸ್ಕøತಿ, ಆಚಾರ, ವಿಚಾರಗಳನ್ನು ಅರಿಯಲು ಶಾಸನ, ಐತಿಹ್ಯ ಆಧಾರಗಳಂತೆಯೇ ಅಡುಗೆ ವೈವಿಧ್ಯತೆಗಳೂ ಸಹ ಬೆಳಕು ಬೀರುತ್ತವೆ.
ಯಾವ ವಯಸ್ಸಿಗೆ ಎಂತಹ ಆಹಾರ ಸೇವಿಸಬೇಕು ? ಹೇಗೆ ಸೇವಿಸಬೇಕು ? ಯಾವಾಗ ಸೇವಿಸಬೇಕು ? ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಖಂಡಿತ ಎದುರಾಗಿದೆ. ಏಕೆಂದರೆ ಆಹಾರ ಬಳಕೆಯ ಹಾಗೂ ತಯಾರಿಕೆಯ ಸರಿಯಾದ ವಿಧಾನವನ್ನರಿಯದೇ ಮನಬಂದಂತೆ ತಿಂದು ನ್ಯೂನಪೋಷಣೆ ಸ್ಥೂಲತೆಯಿಂದ ಬಳಲುತ್ತಿರುವ ಸನ್ನಿವೇಶವನ್ನು ನೋಡುತ್ತಿದ್ದೇವೆ.
ನಾವು ತಿನ್ನುವ ಆಹಾರದಲ್ಲಿ ಶರ್ಕರ ಪಿಷ್ಟಗಳು, ಪ್ರೋಟೀನ್, ಮೇದಸ್ಸು, ನೀರು, ಖನಿಜಗಳು, ಜೀವಸತ್ವಗಳು ಹಾಗೂ ನಾರಿನ ಅಂಶಗಳು ಸಮತೋಲಿತವಾಗಿದ್ದರೆ ಅದು ಸಮತೋಲನ ಆಹಾರವೆನಿಸಿಕೊಳ್ಳುತ್ತದೆ. ಈ ಎಲ್ಲಾ  ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆ ತಯಾರಿಸಬೇಕಾಗುತ್ತದೆ. ಆದರೆ ಇಲ್ಲಿಯೂ ಸಹ ಚಿಕ್ಕವರಿಗೆ, ಮಕ್ಕಳಿಗೆ, ದೊಡ್ಡವರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ವಯೋವೃದ್ಧರಿಗೆ ಇಂತಿಂತಹ ಅಡುಗೆಗಳು ಎಂದು ವಿಭಾಗಿಸಬಹುದು.
ಇಂಥದ್ದಕ್ಕೊಂದು ತಾಜಾ ಉದಾಹರಣೆ ಪದ್ಮಶರ್ಮರವರು ಬರೆದ “ಗರ್ಭಿಣಿ ಹಾಗೂ ಬಾಣಂತಿಯರ ವಿಶೇಷ ಪಾಕ ವೈವಿಧ್ಯ” ಕೃತಿಯಾಗಿದೆ. ಇದು ಇವರ ಎರಡನೇ ಪಾಕ ಕೃತಿ. ಅಡುಗೆ ರುಚಿ ತಯಾರಿಕೆ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ರಾಜ್ಯ ಮಟ್ಟದ ಪತ್ರಿಕೆಗಳಾದ ಸುಧಾ, ಕರ್ಮವೀರ, ವಿಜಯಕರ್ನಾಟಕ ಹೀಗೆ ಅನೇಕ ಪತ್ರಿಕೆಗಳಲ್ಲಿ ತಮ್ಮ ಹೊಸ ಹೊಸ ಸವಿರುಚಿಗಳ ಪರಿಚಯ ಮಾಡುತ್ತಿದ್ದಾರೆ. ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷಿಣಿಯೂ ಆದ ಪದ್ಮಾಶರ್ಮರವರು ಅನೇಕ ಸಮಾಜಪರ, ಮಹಿಳಾಪರ ಗೋಷ್ಠಿ ಹಾಗೂ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಪ್ರಸ್ತುತ ‘ವಿಶೇಷ ಪಾಕ ವೈವಿಧ್ಯ’ ಕೃತಿಯಲ್ಲಿ ಸುಮಾರು 180 ಕ್ಕೂ ಹೆಚ್ಚು ಅಡುಗೆಗಳ ಬಗ್ಗೆ, ಬೇಕಾಗುವ  ಸಾಮಾಗ್ರಿ ಹಾಗೂ ಮಾಡುವ ವಿಧಾನಗಳ ಬಗ್ಗೆ ಮಾಹಿತಿಯಿದೆ. ಈ ಕೃತಿಯನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದಾಗಿದೆ. ಮೊದಲನೆಯದು ಪುಟ ಸಂಖ್ಯೆ ಒಂಬತ್ತರಿಂದ ಅರವತ್ತೊಂಬತ್ತರವರೆಗಿನ ಸುಮಾರು ತೊಂಬತ್ನಾಲ್ಕು ವಿಭಿನ್ನ ರೀತಿಯ ಪೇಯ, ಜ್ಯೂಸ್, ಸೂಪ್, ತಂಬುಳಿ, ಪಲ್ಯ, ಬರ್ಫಿ, ಗೊಜ್ಜು, ಚಟ್ನಿ, ಸಿಹಿ ಹಾಗೂ ಖಾರಕ್ಕೆ ಸಂಬಂಧಿಸಿದ ಗರ್ಭಿಣಿಯರಿಗೆ ಅತ್ಯವಶ್ಯಕವಾದ ಪಾಕ ರುಚಿಗಳಿದ್ದರೆ, ಇನ್ನೂ ಪುಟಸಂಖ್ಯೆ ಎಪ್ಪತ್ತೊಂದರಿಂದ ನೂರಇಪ್ಪತ್ತೆಂಟು ಪುಟಗಳವರೆಗೆ ವಿವಿಧ ಸದಭಿರುಚಿಯ ಲೇಹ್ಯ, ಕಷಾಯ, ಉಂಡೆ, ಪುಡಿಗಳು, ಹುಳಿ, ಸಜ್ಜಿಗೆ, ಪಾನಕ, ಪಾಯಸ, ಬಾತ್, ದೋಸೆ, ಸಾರು, ಜಾಮ್ ಹೀಗೆ ಸುಮಾರು ಎಂಬತ್ತೊಂಬತ್ತು ರುಚಿಕರವೆನಿಸಬಹುದಾದ ಬಾಣಂತಿ ಪಥ್ಯಕ್ಕೆ ಸಂಬಂಧಿಸಿದ ಅಡುಗೆಗಳಿವೆ.
ಹೀಗೆ ಪದ್ಮಶರ್ಮರವರು ತಮ್ಮ ಪಾಕ ಸಾಹಿತ್ಯದ ಮೂಲಕ ಸಾಮಾಜಿಕ ಆರೊಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತಿದ್ದಾರೆ.
ಒಟ್ಟು ನೂರ ಇಪ್ಪಂತ್ತೆಂಟು ಪುಟಗಳ ಈ ಕೃತಿಯ ಮೌಲ್ಯ ಎಂಬತ್ತು ರೂಪಾಯಿಗಳು. ಒನ್ ಏಯ್ತ್ ಡೆಮ್ಮಿ ಗಾತ್ರದ ಈ ಕೃತಿಯು ಉತ್ತಮ ಗುಣಮಟ್ಟದ ಎನ್.ಎಸ್. ಮ್ಯಾಪ್ಲಿಥೋ ಹಾಳೆ ಹೊಂದಿದ್ದು ತುಮಕೂರಿನ ಸ್ಟೂಡೆಂಟ್ ಬುಕ್ ಕಂಪನಿ ಪ್ರಕಾಶನದಲ್ಲಿ ಸೊಗಸಾಗಿ ಮೂಡಿಬಂದಿದೆ.

ಕೃತಿ – ಗರ್ಭಿಣಿ ಹಾಗೂ ಬಾಣಂತಿಯರ “ವಿಶೇಷ ಪಾಕ ವೈವಿಧ್ಯ”
ಲೇಖಕರು - ಪದ್ಮಶರ್ಮ
    ಸಾಲಗಾಮೆ ರಸ್ತೆ, ಹಾಸನ.

    ಮೊ. 9844972714
ಕೃತಿ ದೊರೆಯುವ ಸ್ಥಳ : ಕರಾವಳಿ ಪುಸ್ತಕ ಪ್ರದರ್ಶನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ