ವಿಶ್ವ ಧರ್ಮದ ಎಲ್ಲಾ ಮೌಲ್ಯಗಳನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡಿರುವ ವಚನ ಸಾಹಿತ್ಯ ಮೂಲತಃ ಮಾನವತೆಯ ಮಹತ್ವವನ್ನು ಹೊರಸೂಸುವ ಪ್ರಖರವಾದ ಜ್ಯೋತಿ. ನುಡಿಯೊಂದಾಗಿ ನಡೆ ಮತ್ತೊಂದಾದೊಡೆ ಹಿಡಿದಿದ್ದ ಲಿಂಗವು ಘಟಸರ್ಪ ನೋಡಾ ಎನ್ನುತ್ತಾ ಸತ್ಯದ ಹೊನಲನ್ನು ಹರಿಸಿದವರು ಶಿವಶರಣರು.
ಎಲ್ಲಾ ರೀತಿಯ ಮೌಢ್ಯಗಳನ್ನು ದಿಕ್ಕರಿಸುತ್ತಾ, ಚಾರಿತ್ರ್ಯ, ಆಧ್ಯಾತ್ಮ, ಲೋಕ ಕಲ್ಯಾಣಕ್ಕೆ ಇಡೀ ಬದುಕನ್ನು ಮುಡುಪಾಗಿಟ್ಟವರು ವಚನಕಾರರು.
ಹನ್ನೆರಡನೇ ಶತಮಾನದ ನೂರಾರು ಶರಣರ ಪಂಕ್ತಿಯಲ್ಲಿ ಪ್ರಜ್ವಲಿಸಿದ ಏಕೈಕ ದೃವತಾರೆ ಮಹಾದೇವಿಯಕ್ಕ, ಅನುಭವದ ತಿದಿಯೊತ್ತಿ ಅನುಭಾವದಿ ಜಗವ ತಿದ್ದಿ ಸುಜ್ಞಾನ ದೀವಿಗೆ ಹಚ್ಚಿದ ಕೀರ್ತಿ ಅಕ್ಕಳದು. ಇಹ, ಪರದ ಹಂಗಿಲ್ಲದೇ ವೈರಾಗಿಯಾಗಿ ಮೋಹದುಡುಪ ಕಿತ್ತೊಗೆದು ಜಗದ ಕಣ್ಣ ತೆರೆಸಿದವಳು.
ಸಂಸಾರದ ಬಂಧನ ತೊರೆದು, ಪರಶಿವಗೆ ಒಲಿದು ಶಾಶ್ವತ ಬಾಳಿನೆಡೆಗೆ ಮುಖ ಮಾಡಿದ ಅಕ್ಕಳ ಎದೆಗಾರಿಕೆ ಯಾರನ್ನದರೂ ನಿಬ್ಬೆರಗುಗೊಳಿಸದಿರದು.
ಲೋಕದ ಚೇಷ್ಠೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಠೆಗೆ ಮನವೇ ಬೀಜ
ಎನಗುಳ್ಳದೊಂದು ಮನ
ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ
ಎನಗೆ ಭವವುಂಟೇ ? ಚನ್ನಮಲ್ಲಿಕಾರ್ಜುನಯ್ಯ.
ವಿಶ್ವದ ಆಗು ಹೋಗುಗಳಿಗೆ ಸೂರ್ಯನ ಪ್ರಕಾಶ ಕಾರಣವಾಗಿದೆ. ಪಂಚೇಂದ್ರಿಯಗಳ ಚೇತನಕ್ಕೆ ಮನಸ್ಸೇ ಕಾರಣ. ನನ್ನಲ್ಲಿರುವ ಮನಸ್ಸನ್ನು ನಿಮ್ಮ ಸಂಗಡಕೂಡಿದ ಬಳಿಕ ನನಗೆ ಈ ಸಂಸಾರ ಅಗತ್ಯವಿದೆಯೇ ? ನನಗೆ ಸಂಸಾರದ ಬಂಧನವಿಲ್ಲವೆಂದು ಚನ್ನಮಲ್ಲಿಕಾರ್ಜುನನಲ್ಲಿ ಹೇಳುತ್ತಾಳೆ.
ಚಂದನವ ಕಡಿದು ತೇದೊಡೆ ನೊಂದೆನೆಂದು ಕಂಪ ಬಿಟ್ಟಿತ್ತೆ ?
ತಂದು ಸುವರ್ಣವ ಕಡಿದೊರೆದೊಡೆ ಬೆಂದು ಕಳಂಕ ಹಿಡಿದಿತ್ತೆ ?
ಸಂದು ಸಂದನುಕಡಿದು ಕಬ್ಬನು ತಂದು ಗಾಣದಲಿಕ್ಕೀರೆದಡೆ
ಬೆಂದು ಪಾಕಗೊಳಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತೆ ?
ನಿಮಗೆ ಹಾನಿ ! ಎನ್ನ ಮಲ್ಲಿಕಾರ್ಜುನದೇವಯ್ಯ
ಎನ್ನ ಕೊಂದೊಡೆ ಶರಣೆಂಬುದ ಮಾಣೀ.
ನನ್ನ ಶರೀರವು ನಾಶವಾದರೂ ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ಶರಣಾಗತಳಾಗದೇ ಬಿಡುವವಳಲ್ಲ. ಶ್ರೀಗಂಧವನ್ನು ತಂದು ಕತ್ತರಿಸಿ ತೇದರೆ ಅದರ ಸುಗಂಧವನ್ನು ಬಿಡಲಾರದು. ಬಂಗಾರವ ಬೆಂಕಿಯಲ್ಲಿ ಕರಗಿಸಿದರೂ, ಬೇಯಿಸಿದರೂ ತನ್ನ ಹೊಳಪನ್ನು ಬಿಡುವುದಿಲ್ಲ. ಕಬ್ಬನ್ನು ಗಾಣದಲ್ಲಿ ಹಾಕಿ ಹಿಪ್ಪೆಗೈದು ರಸಮಾಡಿ ಸಕ್ಕರೆಯಾಗಿಸಿದರೂ ಅದು ಸಹಿ ಅಂಶವನ್ನು ಕಳೆದುಕೊಳ್ಳುವುದಿಲ್ಲ. ಅಂತೆಯೇ ಹಿಂದೆ ಮಾಡಿದ ಎಲ್ಲಾ ಹೀನ ಕಾರ್ಯಗಳನ್ನು ನನ್ನ ಮುಂದೆ ತಂದಿಟ್ಟರೂ ಅದು ನಿಮಗೆ ಹಾನಿ, ಎನ್ನನ್ನು ಕೊಂದರೂ ನಿಮಗೆ ಶರಣಾಗದೆ ನಾನು ಬಿಡೆನು ಎನ್ನುವ ಗಟ್ಟಿ ನಿಲುವನ್ನು ನಾವಿಲ್ಲಿ ಕಾಣಬಹುದು.
ಅಕ್ಕಮಹಾದೇವಿ ತನ್ನನ್ನು ಸಂಪೂರ್ಣವಾಗಿ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿಕೊಂಡು ಅವನಲ್ಲಿ ಒಂದಾಗಲು ಬಯಸುತ್ತಾಳೆ.
ಎನ್ನ ಮನವ ಮಾರುಗೊಂಡನವ್ವ
ಎನ್ನ ಮನವ ಸೂರೆಗೊಂಡನವ್ವ
ಎನ್ನ ಸುಖವ ಒಪ್ಪಗೊಂಡನವ್ವ
ಎನ್ನಿಂದ ಇಂಬುಗೊಂಡನವ್ವ
ಚನ್ನಮಲ್ಲಿಕಾರ್ಜುನಗೊಲುಮೆಯಾನಾಳು !
ಚನ್ನಮಲ್ಲಿಕಾರ್ಜುನನು ನನ್ನ ಮನವನ್ನು ಸೂರೆಗೊಂಡನು, ಎನ್ನ ಮನವ ಮಾರಿಕೊಳ್ಳುವಂತೆ ಮಾಡಿದನು. ನನ್ನ ಸಂತಸವನ್ನು ಹೆಚ್ಚಿಸಿದನು, ನನಗೆ ಆಶ್ರಯ ನೀಡಿದಂತಹ ನಲ್ಮೆಯ ಚನ್ನಮಲ್ಲಿಕಾರ್ಜುನನ ಸೇವಕಿಯು ನಾನೆಂದು ಅಕ್ಕಮಹಾದೇವಿ ಇಲ್ಲಿ ಹೇಳಿದ್ದಾಳೆ.
ಮಹಾದೇವಿಯಕ್ಕ ಆಲಿಂಗನದ ಸಖ್ಯವನ್ನು ಪರಶಿವನಲ್ಲಿ ಕಾಣುವ ರೀತಿ ಅಮೋಘವಾದುದು, ಅಗಮ್ಯವಾದುದು. ಅದನ್ನು ಈ ಕೆಳಗಿನ ವಚನದಲ್ಲಿ ಕಾಣಬಹುದಾಗಿದೆ.
ಹಗಲಿನ ಕೂಟಕ್ಕೇ ಹೋರಿ ಬೆಂಡಾದೆ
ಇರುಳಿನ ಕೂಟಕ್ಕೇ ಇಂಬುದು ಹತ್ತಿದೆ
ಕನಸಿನಲ್ಲಿ ಮನ ಸಂಗವಾಗಿ
ಮನಸ್ಸಿನಲ್ಲಿ ಮೈಮರೆದು ಸಂಗವಾಗಿರ್ದೆ
ಚನ್ನಮಲ್ಲಿಕಾರ್ಜುನನೊಪ್ಪಚ್ಚಿ ಕೂಡಿ ಕಣ್ತೆರೆದೆನವ್ವ !
ಚನ್ನಮಲ್ಲಿಕಾರ್ಜುನನನ್ನು ಸೇರಲು ಹಗಲು ಬಳಲಿ ಬೆಂಡಾದೆನು, ರಾತ್ರಿಯಲ್ಲಿ ಆತನನ್ನು ಆಶ್ರಯಿಸಿದೆನು. ಸ್ವಪ್ನದಲ್ಲಿ ಮನಸಾ ಕೂಡಿದ ಅನುಭವವನ್ನು ಕಂಡು ಕಣ್ತೆರೆದೆನು ಎಂದು ಮನದ ಮಿಡಿತವನ್ನು ಹೊರಗೆಡವಿದ್ದಾಳೆ.
ರೂಪಿಲ್ಲದ, ಕೇಡಿಲ್ಲದ, ಸಾವಿಲ್ಲದ ಗಂಡನನ್ನು ಬಯಸಿ ಅಂತೆಯೇ ಪರಶಿವನಿಗೊಲಿದು ತನು-ಮನವನ್ನು ಚನ್ನಮಲ್ಲಿಕಾರ್ಜುನನಿಗರ್ಪಿಸಿ ಮಾನವಕುಲ ತಾನೊಂದೇ ವಲಂ, ಎಂಬಂತೆ, ಮನುಜರಲ್ಲಿ ವಿಶ್ವಮಾನವೀಯ ಮೌಲ್ಯಗಳನ್ನು ಭಿತ್ತಿದವಳು ಅಕ್ಕ. ಆಕೆ ಇಡಿಜಗತ್ತಿಗೆ ಮಹಾದೇವಿ, ಆದರ್ಶಮಾತೆ, ಸನ್ಮಾರ್ಗದಾತೆ, ವೀರಶರಣೆ, ಕದಳಿಯ ಕರ್ಪೂರ. ಅಕ್ಕ ಸಖ್ಯ ಮಾಡಬಯಸಿದ್ದು ಶಿವನಲ್ಲಿ ಕೊನೆಗೂ ಅವನ ಶ್ರೀಶೈಲದಲ್ಲಿ ಒಂದಾಗುತ್ತಾಳೆ.
ಕೊಟ್ರೇಶ್ ಎಸ್.ಉಪ್ಪಾರ್
ಲೇಖಕರು
ತೇಜೂರು ರಸ್ತೆ, ಶಾಂತಿನಗರ,
ಹಾಸನ-573201
ಮೊ-9739878197
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ