ಶನಿವಾರ, ಮೇ 9, 2015

ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದ ಮೇರು ಲೇಖಕಿ – ಡಾ|| ವೈ.ಸಿ.ಭಾನುಮತಿ

ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದ ಮೇರು ಲೇಖಕಿ – ಡಾ|| ವೈ.ಸಿ.ಭಾನುಮತಿ
ಕನ್ನಡ ಸಾಹಿತ್ಯದಲ್ಲಿ ಪುರುಷರು ಎಷ್ಟು ಸಾಧನೆ ಮಾಡಿರುವರೋ ಅಷ್ಟೇ ಸಾಧನೆಯನ್ನು ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಮಾಡಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಲೇಖಕಿಯರ ದಂಡೇ ಇದೆಯೆನ್ನಬಹುದು. ಪಾರ್ವತಿ ಕೃ.ನ.ಮೂರ್ತಿ, ಮಂಗಳಾ ಸತ್ಯನ್, ಸುಬ್ಬ ಲಕ್ಷ್ಮಿ, ವಿಜಯಾ ದಬ್ಬೆ, ಬಾನು ಮುಸ್ತಾಕ್ ಮುಂತಾದವರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಸಾಹಿತ್ಯ, ಜಾನಪದ ಸಾಹಿತ್ಯ, ಜನಾಂಗೀಯ ಅಧ್ಯಯನಗಳÀ ಸಂಶೋಧಕಿಯಾಗಿ, ಅಳಿವಿನ ಅಂಚಿನಲ್ಲಿರುವ ಹಲವಾರು ಕೃತಿಗಳನ್ನು ಸಂಪಾದಿಸಿ ಜೀವ ತುಂಬುವ ಕಾಯಕದಲ್ಲಿ ತೊಡಗಿರುವ ಕನ್ನಡ ಸಾಹಿತ್ಯದ ಪ್ರಭುದ್ದ ಲೇಖಕಿ ಡಾ|| ವೈ.ಸಿ.ಭಾನುಮತಿಯವರು.
 ವೈ.ಸಿ.ಭಾನುಮತಿಯವರು ಕ್ರಿ.ಶ. 1953 ಜನವರಿ 14 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದ ವೈ.ಬಿ.ಚನ್ನೇಗೌಡ ಹಾಗೂ ಶ್ರೀಮತಿ ಎಚ್.ಎಸ್.ಜಯಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
ಬೇಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರೌಢ ಶಾಲೆಯಲ್ಲಿ ಒಂದರಿಂದ ಹತ್ತನೆಯ ತರಗತಿವರೆಗೆ ವ್ಯಾಸಾಂಗ ಮಾಡಿದ ಭಾನುಮತಿಯವರು ಹಾಸನದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ನಂತರ ಮೈಸೂರಿನ ಮಹಾರಾಣಿ ಕಲೇಜಿನಲ್ಲಿ ಬಿ.ಎಸ್.ಸಿ ಪದವಿ ಮುಗಿಸಿದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಭಾನುಮತಿಯವರಿಗೆ ಸಾಹಿತ್ಯದ ಬಗ್ಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. ಆ ಸಂದರ್ಭದಲ್ಲಿ ಸ್ನೇಹಿತೆಯೊಬ್ಬಳು ಬರೆದ ಪತ್ರದಿಂದ ಪ್ರಭಾವಿತರಾದ ಇವರು ಕನ್ನಡ ಸಾಹಿತ್ಯದ ಕಡೆಗೆ ಒಲವು ತೋರಿಸಿದರು. ಈ ಕಾಲ ಘಟ್ಟವೇ ಭಾನುಮತಿಯವರನ್ನು ಕನ್ನಡ ಸಾಹಿತ್ಯದತ್ತ ಕರೆದುಕೊಂಡು ಬಂದಿತೆನ್ನಬಹುದು. ತದನಂತರ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಮಂಡಿಸಿದ ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಮಹಾಪ್ರಬಂಧಕ್ಕೆ ವಿಶ್ವ ವಿದ್ಯಾಲಯವು ಆ.ನೆ.ಉಪಾದ್ಯೆ ಚಿನ್ನದ ಪದಕದೊಂದಿಗೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಡಾ|| ವೈ.ಸಿ.ಭಾನುಮತಿಯವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗ್ರಂಥ ಸಂಪಾದನಾ ವಿಭಾಗದ ಪ್ರಥಮ ದರ್ಜೆಯ ಸಂಶೋಧನಾ ಸಹಾಯಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಇದೇ ಅವರಿಗೆ ವರದಾನವಾಯಿತೆನ್ನಬಹುದು. ಮೊದಲೇ ಸಾಹಿತ್ಯಿದ ಬಗ್ಗೆ ಆಸಕ್ತಿಯಿದ್ದ ಭಾನುಮತಿಯವರು ಇಲ್ಲಿ ಗ್ರಂಥ ಅಧ್ಯಯನದಲ್ಲಿ ನಿರತರಾಗಿ ಪ್ರಾಚೀನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ಮಾಡಿದರು.
ಡಾ|| ವೈ.ಸಿ.ಭಾನುಮತಿಯವರು ಮೂಲತಃ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದರೂ ಆಯ್ಕೆಮಾಡಿಕೊಂಡದ್ದು ಸಂಶೋಧನಾ ಕ್ಷೇತ್ರವನ್ನು. ಅಳಿವಿನ ಅಂಚಿನಲ್ಲಿದ್ದ ಹಲವಾರು ಹಳಗನ್ನಡ ಕೃತಿಗಳಿಗೆ ಜೀವ ತುಂಬಿ ಹೊಸ ರೂಪದಲ್ಲಿ ಕನ್ನಡ ಸಾಹಿತ್ಯಾಸಕ್ತರಿಗೆ ನೀಡಿದ್ದಾರೆ.
ಜಾನಪದ ಕಾವ್ಯ ಭಾಷೆಯನ್ನು ಸಮರ್ಥವಾಗಿ ರೂಢಿಸಿಕೊಂಡು ವಸಾಹತುಶಾಹಿ ಅನುಭವದಿಂದಾಗಿ ಕಳೆದು ಹೋಗಿರುವ ದೇಸೀ ವ್ಯಕ್ತಿತ್ವದ ಮೂಲಗಳ ಹುಡುಕಾಟದಲ್ಲಿ ತೊಡಗಿರುವ ಡಾ||ವೈ.ಸಿ.ಭಾನುಮತಿಯವರು ಇಬ್ಬೀಡಿನ ಜನಪದ ಕಥೆಗಳು, ಜಾನಪದ ಭಿತ್ತಿ, ಚಂದ್ರಹಾಸನ ಕಥೆ, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ಮಕ್ಕಳ ಹಾಡುಗಳು, ಜಾನಪದ ಅಡುಗೆ ಮುಂತಾದ ಹನ್ನೊಂದು ಕೃತಿಗಳನ್ನು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ.
ನವ್ಯ ಧೋರಣೆ ಮತ್ತು ಅಭಿವ್ಯಕ್ತಿ ತಂತ್ರವನ್ನು ಜನಪದ ಭಾಷೆಯಾಗಿ ಭಾನುಮತಿಯವರು ಬಳಸಿದ ರೀತಿ ಅದ್ವತೀಯವಾದುದು ಎಂದರೆ ಅತಿಶಯೋಕ್ತಿಯಾಗಲಾರದು. ತರೀಕೆರೆ ಪಾಳೇಗಾರರ ವಿಚಾರವಾಗಿ ತಿಳಿಸುವ ಐತಿಹಾಸಿಕ ವಸತುಗಳನ್ನೊಳಗೊಂಡ ಕೃಷ್ಣಶರ್ಮರವರು ವಿರಚಿತ ‘ಸರಜಾಹನುಮೇಂದ್ರ ಯಶೋವಿಲಾಸಂ’ ;  ವೀರಶೈವ ಕವಿಗಳಲ್ಲಿ ಪ್ರಮುಖನಾಗಿದ್ದ ಕುಮಾರ ಚೆನ್ನಬಸವನು ನವೀನ ಹಾಗೂ ಪುರಾಣ ಕಾಲದ ಕುರಿತು ವಾರ್ಧಕ ಷಟ್ಪದಿಯಲ್ಲಿ ಬರೆದ ‘ಪುರಾತನರ ಚರಿತೆ’ ; ಹರದನಹಳ್ಳಿಯ ನಂಜಣಾಚಾರ್ಯ ಕವಿಯು ವಾರ್ಧಕ ಷಟ್ಪದಿಯಲ್ಲಿ ಬರೆದ ‘ಏಕೋ ರಾಮೇಶ್ವರ ಪುರಾಣ’ ; ಜೈನ ಸಾಹಿತ್ಯದ ಕವಿ ಶೃತಕೀರ್ತಿಯು ಸ್ತ್ರೀ ಕುರಿತಾಗಿ ಬರೆದ ಮೊದಲ ಜೈನ ಕೃತಿ ‘ವಿಜಯ ಕುಮಾರಿ ಚರಿತೆ’ ; ಜೈನ ಕವಿ ಆದಿದೇವನು ಸಾಂಗತ್ಯದಲ್ಲಿ ಬರೆದ ‘ಸುಕುಮಾರ ಚರಿತೆ’ ; ಕಳ್ಳತನ ಮಾಡಿಯೇ ಜೀವನ ಸಾಗಿಸುತಿದ್ದ ಚಿಕ್ಕಣ್ಣ ವೈಚಾರಿಕ ಹಾಗೂ ಧಾರ್ಮಿಕ ಹರಿಕಾರ ಜಗಜ್ಯೋತಿ ಬಸವಣ್ಣನವರ ಪ್ರಭಾವದಿಂದ ಕಳ್ಳತನ ತೊರೆದು ಪರಿಶುದ್ದ ಜೀವನ ಸಾಗಿಸಿದ ಪ್ರಸಂಗವನ್ನು ಕುರಿತು ಕುಮಾರಚೆನ್ನಬಸವನು ಬರೆದ ‘ನಿಜಚಿಕ್ಕಲಿಂಗಯ್ಯ ಸಾಂಗತ್ಯ’ ; ಮುಖಬೋಳು ಸಿದ್ದರಾಮ ಬರೆದ ‘ಷಟ್ಸ್ಥಲ ತಿಲಕ’ ; ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನನ್ನು ಕುರಿತು ಚಿಕ್ಕ ಪದ್ದಣ್ಣಶೆಟ್ಟಿ ಬರೆದ ‘ಅನಂತನಾಥ ಚರಿತೆ’ ; ಮಡಿವಾಳೇಶ್ವರನ ಲಘು ಕೃತಿಗಳು ; ವಿಕ್ರಮ ಸಿಂಹಾಸನದ ಮೆಟ್ಟಿಲುಗಳಲ್ಲಿದ್ದ ಮೂವತ್ತೆರಡು ಗೊಂಬೆಗಳು ಹೇಳುವ ‘ಬತ್ತೀಸ ಪುತ್ಥಳಿ ಕಥೆ’ ; ಕನ್ನಡದ ಶ್ರಾವಕಾಚಾರ ಗ್ರಂಥಗಳು ; ಮಡಿವಾಳೇಶ್ವರ ಕಾವ್ಯ ; ಬಸವ ಮಹತ್ವದ ಸಾಂಗತ್ಯ ; ಸೌಂದರ್ಯ ಕಾವ್ಯ, ಅರಸರ ಚರಿತ್ರೆಗಳು ಹೀಗೆ ಮೂವತ್ತಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಸಂಪಾದಿಸಿ ಜೀವ ತುಂಬಿದ್ದಾರೆ.
ಗ್ರಂಥ ಸಂಪಾದನೆಯ ಕೆಲವು ಅಧ್ಯಯನಗಳು, ಗ್ರಂಥ ಸಂಪಾದನೆಯ ಎಳೆಗಳು, ಆಲಿ ನುಂಗಿದ ನೋಟ, ಸಮಾಗತ ಮುಂತಾದ ಅತ್ಯಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ‘ವಿಕ್ರಮಾದಿತ್ಯನ ಸಿಂಹಾಸನ’ ಎಂಬ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಯನ್ನು ರಚಿಸಿದ್ದಾರೆ.
ಹೀಗೆ ಡಾ|| ವೈ.ಸಿ.ಭಾನುಮತಿಯವರು ಸಂಶೋಧನೆ, ಸಂಪಾದನೆ ಹಾಗೂ ಕೃತಿ ರಚನೆಗಳಲ್ಲಿ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದ ಜಾನಪದ ವಿಶ್ವಕೋಶದ ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಮತ್ತು ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಹಸ್ತ ಪ್ರತಿ ವರ್ಣನಾತ್ಮಕ ಸೂಚಿಯ ಐದು ಸಂಪುಟಗಳಲ್ಲಿ ಕೆಲಸ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೌಲ್ಯಭರಿತ ಕಾಯಕ ಮಾಡುವುದರ ಮೂಲಕ ತವರು ಜಿಲ್ಲೆಯಾದ ಹಾಸನದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೇವಲ ಕಥೆ, ಕಾದಂಬರಿ, ಕಾವ್ಯ, ನಾಟಕ ಮಾತ್ರ ಸಾಹಿತ್ಯಿಕ ಕೆಲಸವಲ್ಲ . ಅದರಾಚೆಗೂ ಚಾಚಿದ ಸಂಶೋಧನೆ, ಸಂಪಾದನೆ, ಜಾನಪದ ಅದ್ಯಯನ ಮುಂತಾದ ಅಪರೂಪದ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಹುದೆಂದು ವೈ.ಸಿ.ಭಾನುಮತಿಯವರು ಸಾಧಿಸಿ ತೋರಿಸಿದ್ದಾರೆ.
1984 ರಲ್ಲಿ ‘ಸಹ್ಯಾದ್ರಿ ಖಂಡ’ ಹಾಗೂ 1989 ರಲ್ಲಿ ‘ಬತ್ತೀಸ ಪುತ್ಥಳಿ ಕಥೆ’ ಸಂಪಾದನೆಗಾಗಿ ಆಯಾ ವರ್ಷದ ಶ್ರೇಷ್ಠ ಗ್ರಂಥಗಳೆಂದು ಪರಿಗಣಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿವೆ. ಇವರ ಸುಪ್ರಸಿದ್ದ ಸಂಶೋಧನಾ ಗ್ರಂಥವಾದ ‘ಮಲೆನಾಡು ಶೈವ ಒಕ್ಕಲಿಗರು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’ , ಹಾಗೂ ತಿ.ನಂ.ಶ್ರೀ ಸಂಶೋಧನಾ ಪ್ರಶಸ್ತಿ ದೊರೆತಿದೆ. ಗ್ರಂಥ ಸಂಪಾದನೆಯ ಕೆಲವು ಅದ್ಯಾಯನ ಮತ್ತು ಬತ್ತೀಸ ಪುತ್ಥಳಿ ಕೃತಿಗಳಿಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ ಹಾಗೂ ತಿ.ನಂ.ಶ್ರೀ ಸಂಶೋಧನಾ ಪ್ರಶಸ್ತಿಗಳು ದೊರೆತಿವೆ. ಇವರ ‘ಪುಟ್ಟ ಮಲ್ಲಿಗೆ ಹಿಡಿತುಂಬ’ ಕೃತಿಗೆ ಕನ್ನಡ ಸಾಹಿತ್ಯದ ದತ್ತಿ ಬಹುಮಾನ ದೊರೆತಿದೆ. ಇವರ ಇನ್ನೊಂದು ಪ್ರಮುಖ ಕೃತಿಯಾದ ‘ಇಬ್ಬೀಡಿನ ಜನಪದ ಕಥೆಗಳು’ ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೆ ಕರ್ನಾಟಕ ವಿದ್ಯಾವರ್ಧಕ ಪ್ರಶಸ್ತಿ, ಫ.ಗು.ಹಳಕಟ್ಟಿ ಸಂಶೋಧನಾ ಪ್ರಶಸ್ತಿ, ಹ.ಕ.ರಾಜೇಗೌಡ ಸಂಪಾದನಾ ಪ್ರಶಸ್ತಿ, ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿಗಳು ಸೇರಿದಂತೆ ನೂರಾರು ಸಂಘ, ಸಂಸ್ಥೆಗಳು ಭಾನುಮತಿಯವರನ್ನು ಸನ್ಮಾನಿಸಿ ಗೌರವಿಸಿವೆ.
ತವರು ತಾಲ್ಲೂಕಿನ ಹಲ್ಮಿಡಿಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಇವರ ಸಾಧನೆಗೆ ಸಂದಿರುವುದು ಶ್ಲಾಘನೀಯವಾದುದು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ