ಮಂಗಳವಾರ, ಮೇ 27, 2014

ಹರಿಜನಾಭ್ಯುದಯ ಚೇತನ ಡಿ. ಗೋವಿಂದಾಸ್

          ದಲಿತ ಸಾಹಿತ್ಯ ಇಂದು ಭಾರತದ ಹಲವಾರು ಭಾಷೆಗಳಲ್ಲಿ ಪ್ರಖ್ಯಾತಿ ಪಡೆದಿದೆ. ಅವುಗಳಲ್ಲಿ ಕನ್ನಡ ದಲಿತ ಸಾಹಿತ್ಯ ಬಹಳ ಮುಖ್ಯವಾದುದು. ಕನ್ನಡ ದಲಿತ ಸಾಹಿತ್ಯದ ಅಲೆ ಎದ್ದಿದ್ದು ಕಾವ್ಯಗಳ ಮೂಲಕ ಎನ್ನಬಹುದು. ಅವ್ಯಾಹತವಾಗಿ ಹರಿದು ಬಂದ ಕನ್ನಡ ಕಾವ್ಯ ಪರಂಪರೆಯಲ್ಲಿ ಪರಿವರ್ತನೆಯ  ಅಲೆಯಾಗಿ ಕಾಣಿಸಿಕೊಂಡಿದ್ದೇ ದಲಿತ ಸಾಹಿತ್ಯ. ಅದರಲ್ಲೂ 20 ನೆಯ ಶತಮಾನದ 60 ರಿಂದ 70 ರ ದಶಕಗಳಲ್ಲಿ ಪರಿಸ್ಥಿತಿಯ ಒತ್ತಡದ ಕಾರಣದಿಂದ ಉದಯಿಸಿದ ಈ ಸಾಹಿತ್ಯ ಜನಪರ ದೃಷ್ಟಿಕೋನವನ್ನು ಹೊಂದಿದೆ. ಬದುಕಿನ ಶೋಧನೆಗೆ ನಿರಂತರವಾಗಿ ಹಂಬಲಿಸುವ, ಯಾವಾಗಲೂ ಶೋಷಿತರ ಪರ ನಿಲ್ಲುವ ದಲಿತ ಸಾಹಿತ್ಯದ ಅಧ್ಯಯನ  ಸಾಂಸ್ಕೃತಿಕವಾಗಿ ಮಹತ್ತರವಾದುದೆಂದರೆ ತಪ್ಪಾಗದಿರದು.
        ಇದು ಇಂದು ನಿನ್ನೆಯದಲ್ಲ, ಕನ್ನಡ ಸಾಹಿತ್ಯ ಉದಿಸಿದಂದಿನಿಂದ  ಅಲ್ಲಲ್ಲಿ ದಲಿತ ಸಾಹಿತ್ಯ ಮೊಳಕೆಯೊಡೆಯುತ್ತಲೇ ಬಂದರೂ ಪಟ್ಟಬದ್ದ ಹಿತಾಸಕ್ತಿಗಳಿಂದ ದಮನಕ್ಕೊಳಗಾಗಿ ಮುಖ್ಯವಾಹಿನಿಗೆ ಬರದೇ ಹೋಯಿತು. ಆದರೆ ಕ್ರಾಂತಿರೂಪ ಪಡೆದುಕೊಂಡದ್ದು ಹನ್ನೇರಡನೆಯ ಶತಮಾನದ ಬಸವಾದಿ ಶರಣರ ಜಾತ್ಯಾತೀತ ಭಾವನೆಗಳಿಂದ ಹೊಮ್ಮಿಬಂದ ವಚನ ಸಾಹಿತ್ಯದಿಂದ ಎನ್ನಬಹುದು.
      ಇವುಗಳ ಹೊರತಾಗಿಯೂ 20 ನೆಯ ಶತಮಾನದ ಆದಿಯಲ್ಲಿ ಗೊರೊರು ಸಮಕಾಲೀನರಾಗದ್ದ ಗೋವಿಂದ ದಾಸ್ ಆಧುನಿಕ ಕನ್ನಡ ದಲಿತ ಸಾಹಿತ್ಯದ ಮೊದಲಿಗರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ಕಾವ್ಯ ಹಾಗೂ ಅತ್ಯುತ್ತಮ ನಾಟಕಕಾರರಾಗಿದ್ದ ಇವರು ಅಪ್ಪಟ ಗಾಂಧಿವಾದಿ. ದೇಸೀ ಸೊಗಡಿನ ಗರ್ಭದಲ್ಲಿ ಉದಿಸಿದ ಇವರ ಸಾಹಿತ್ಯ ಶೋಷಿತರ ಧನಿಯಾಗಿ ನೆಲೆನಿಂತಿತು ಎಂದರೆ ಅತಿಶಯೋಕ್ತಿಯಾಗಲಾರದು.
      ಹೋರಾಟ ಮನೋಭಾವ ಮೈಗೂಡಿಸಿಕೊಂಡು ಸಾಹಿತ್ಯ ಕ್ರಾಂತಿ ಮಾಡಿದ ಈ ಮಹನ್ ಮೇದಾವಿ ಹಾಸನದವರೆಂಬುದೇ ನಮ್ಮೆಲ್ಲರರಿಗೆ ಹೆಮ್ಮೆ.
       ಡಿ. ಗೋವಿಂದದಾಸ್ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ  'ದಮ್ಮನಿಂಗಳ' ದ ಶ್ರೀ ದಾಸಪ್ಪ ಮತ್ತು ಶ್ರೀಮತಿ ಕೆಂಪಮ್ಮ ದಂಪತಿಗಳ ಮಗನಾಗಿ 1910 ರಲ್ಲಿ ಜನಿಸಿದರು. ಇವರ ತಂದೆ ಚರ್ಮದ ವ್ಯಾಪಾರಿಯಾಗಿದ್ದರು. ಇವರದು ದಾನ, ಧರ್ಮ, ನ್ಯಾಯ ನಿಷ್ಟೆಗೆ ಹೆಸರಾದ ಸಂಪ್ರದಾಯಸ್ಥ ಮನೆತನವಾಗಿತ್ತು, ಆದ್ದರಿಂದಲೇ ಬಾಲ ಗೋವಿಂದನ ವ್ಯಕ್ತಿತ್ತ್ವವೂ ಅಂತೆಯೇ ರೂಪುಗೊಂಡಿತು. ಮುಂದೆ ಇವರು ತಮ್ಮ ಸಾಹಿತ್ಯದಲ್ಲಿ ಬದುಕಿನ ವಸ್ತು ಸ್ಥಿತಿಯನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
        ಸಾಹಿತ್ಯ ಸಮಾಜದ ಕೊರತೆಗಳಿಗೆ ಕನ್ನಡಿ ಹಿಡಿಯಬೇಕು, ಜನರ ಆಶೋತ್ತರಗಳಿಗೆ ಸಂ್ಪದಿಸಬೇಕೆಂಬುದೇ ಗೋವಿಂದದಾಸರ ಪ್ರಮುಖ ನಿಲುವಾಗಿತ್ತು. ಕವಿಯಾದವನಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಅದು ಇದ್ದಾಗ ಮಾತ್ರ ಆತನೊಬ್ಬ ಪ್ರಜ್ಞಾವಂತನಾಗಿ ಬೆಳೆಯಲು ಸಾಧ್ಯ. ನೈಜ ಬದುಕಿನ ಕುರಿತು ಕಾಳಜಿ ಬಂದದ್ದೇ ದಲಿತ ಪಂಥದ  ಸಂದರ್ಭದಲ್ಲಿ. ಆಧುನಿಕವಾಗಿ ಇಂಥದ್ದೊಂದು ಮಹತ್ಸಾಧನೆಗೆ ಅಡಿಯಿಟ್ಟವರೇ ಗೋವಿಂದದಾಸ್.
ಶತಶತಮಾನಗಳಿಂದ ಶೋಷಣೆಯ ಬೆನ್ನಲ್ಲೇ ಹುಟ್ಟಿ ಬದುಕಿ ಸಾಯುವ ದಲಿತರು ಬದುಕಿನ ಚಿತ್ರಣಗಳ ವಿರುದ್ದ ಹೋರಾಡಲು ಜನ್ಮತಾಳಿದ್ದು ದಲಿತ ಸಾಹಿತ್ಯ. ಇದು ಪ್ರಮುಖವಾಗಿ ಸಾಮಾಜಿಕ ನೋವುಗಳನ್ನೇ ತನ್ನ ಮೂಲಕ ವಸ್ತುವನ್ನಾಗಿಸಿಕೊಂಡು ಅನೈತಿಕ ಮೌಲ್ಯಗಳ ವಿರುದ್ದ ಪ್ರತಿಭಟನೆ ವ್ಯಕ್ತ ಪಡಿಸುತ್ತಲೇ ಬಂದಿದೆ.
        ದೇಶದಲ್ಲಿ ಅಸಮಾನತೆ, ಶೋಷಣೆಗಳಂತಹ ಅವೈಚಾರಿಕ ನೆಲೆಗಳು ಭದ್ರವಾಗುತ್ತಿರುವ ಸಂದರ್ಭದಲ್ಲಿ ಗೋವಿಂದದಾಸರು ತಮ್ಮ ದಿಟ್ಟತನ ಸ್ಥಿತ ಪ್ರಜ್ಞೆಯಿಂದ ಸಮಾಜಪರ  ಸಾಹಿತ್ಯದಲ್ಲಿ ತೊಡಗಿದರು. ಆದರೆ ಈ ಹಾಳು ಸಮಾಜ ಅವರನ್ನು ಮುಖ್ಯವಾಹಿನಿಗೆ  ತರಲೇಯಿಲ್ಲ. ಇವರು ಕೂಡ ಸಾಹಿತ್ಯ ಶೋಷಣೆಗೆ ತುತ್ತಾದರು. ಬೇರ್ಯಾವುದೇ ಮೇಲ್ವರ್ಗದ ವ್ಯಕ್ತಿ ಗೋವಿಂದಾಸರಷ್ಟು ಸಾಹಿತ್ಯ ಕೈಂಕರ್ಯ ಮಾಡಿದ್ದಿದ್ದರೆ ಹೊಗಳಿ ಅಟ್ಟಕ್ಕೇರಿಸಿ ಕುಣಿದಾಡುತಿತ್ತೇನೋ?
        ಗೋವಿಂದಾಸರು ಕೇವಲ ಕವಿ, ನಾಟಕಕಾರ,  ಹೋರಾಟಗಾರರಷ್ಟೇ ಅಲ್ಲ, ಅವರೊಬ್ಬ ಸ್ವತಃ ಕೋಲಾಟದ ಕಲಾವಿದರು, ಸೊಗಸಾದ ಹಾಡುಗಾರರೂ ಆಗಿದ್ದರು. ದೇಸೀ ಸಂಸ್ಕೃತಿಯ ಪ್ರತೀಕದಂತಿದ್ದ  ಗೋವಿಂದಾಸರು ತನುವಿನ ಪ್ರತಿ  ಅಣು ಅಣುವಿನಲ್ಲೂ ಜನಪದ ಸೊಗಡು ಆವರಿಸಿತ್ತು. ಮಾಸ್ತಿ ಹಾಗೂ ಬಿ.ಎಂ ಶ್ರೀ ರವರ ಸಲಹೆ, ಪ್ರೋತ್ಸಾಹಗಳಿಂದ 1937 ರಲ್ಲಿ ಹೊರಬಂದ 'ಹರಿಜನಾಭ್ಯುದಯ' ಕವನ ಸಂಕಲನ ಗೋವಿಂದದಾಸರಿಗೆ  ಸಾಹಿತ್ಯ ಕ್ಷೇತ್ರದಲ್ಲಿ ಮೂಲ ನೆಲೆಯನ್ನು ಒದಗಿಸುತ್ತದೆ
         ಹರಿಜನರ ಶೋಷಣೆ ದಮನಕ್ಕೊಳಗಾದ ಪ್ರಸಂಗಗಳು, ಅಭ್ಯುದಯದ  ಮಾರ್ಗಗಳನ್ನು ಸೊಗಸಾಗಿ ಬಿಂಬಿಸಿದ್ದಾರೆ. ಈ ಕವನ ಸಂಕಲನದಲ್ಲಿನ ಕವಿತೆಗಳನ್ನು ಪ್ರಮುಖವಾಗಿ ಏಳು ರೀತಿಯಾಗಿ ವಗರ್ೀಕರಿಸಬಹುದು. ಜಾತಿಯತೆ ಅಸ್ಪೃಶ್ಯತೆಗೆ ಸಂಬಂಧಿಸಿದ ಕವಿತೆಗಳು, ನಿಸರ್ಗ ಪರಿಸರಕ್ಕೆ ಸಂಬಂಧಿಸಿದ ಕವಿತೆಗಳು, ವೈಚಾರಿಕತೆಗೆ ಸಂಬಂಧಿಸಿದ ಕವಿತೆಗಳು, ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ಕವಿತೆಗಳು, ಪ್ರಾದೇಶಿಕ ಹಾಗೂ ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ ಕವಿತೆಗಳಿವೆ. ಇವರ ಸಮಗ್ರ ಕಾವ್ಯವನ್ನು ಅವಲೋಕಿಸಿದರೆ ಸಾಕು ಇವರ ವೈಶಾಲ್ಯ ಮನೋಧೋರಣೆ, ಸಮಾಜಪರ ಕಾಳಜಿಗಳು ಗೋಚರಿಸದೆ ಇರದು. ತಮ್ಮ ಹತ್ತನೆಯ ವಯಸ್ಸಿನಿಂದಲೇ ಕಾವ್ಯ ಬರೆಯಲು ಪ್ರಾರಂಭಿಸಿದ ಗೋಂವಿಂದದಾಸರು 100 ಕ್ಕೂ ಅಧಿಕ ಸಾತ್ತ್ವಿಕ ಚಿಂತನೆಗಳ ಗಟ್ಟಿತನದ ಕಾವ್ಯಗೊಂಚಲನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ಮತಭೇದ ನಿಮಗೆ | ಅತಿಬಾಧೆ ನಮಗೆ
ಹಿತವನು ಬಯಸದಿ | ಗತಿ ಗೆಡುತ್ತೀರಿ
ಎಂಬ ಸಾಲುಗಳಲ್ಲಿ ಗೋವಿಂದ ದಾಸರು ಬ್ರಾತೃತ್ತ್ವ್ವವಷ್ಟೇ ಸಾರಲಿಲ್ಲ. ಇಲ್ಲಿ ಕನ್ನಡ ಸಾಹಿತ್ಯದ ಛಂದೋನಿಯಮಗಳ ಝೆಂಕಾರವನ್ನು ಕಾಣಬಹುದು. ಆದಿಪ್ರಾಸ, ಲಯ, ಮಾತ್ರಗಣಗಳ ಅರಿವಿನಾಲಯದಲ್ಲಿ ಕಾವ್ಯ ರಚನೆಯ ಧೀಶಕ್ತಿ ಗೋವಿಂದ ದಾಸರಿಗೆ ಒಲಿದಿತ್ತು ಎಂಬುದನ್ನು ಗಮನಿಸಬಹುದು.
        ತೀರ ಕಡುಕಷ್ಟದಲ್ಲಿಯೆ ಅಕ್ಷರ ಕಲಿತು, ಕ್ರೂರ ಅಸ್ಷೃಶತೆಯ ಅಪಮಾನ ಅನುಭವಿಸುತ್ತಲೆ, ಜಾತಿಯತೆ, ಅಸ್ಪೃತೆಗೆ ಸಂಬಂಧಿಸಿದ ಅನೇಕ ಕವಿತೆಗಳನ್ನು ಬರೆದಿದ್ದಾರೆ.
ಹರಿಜನರೊಳು ಜನ್ಮ ತಳೆಯಲೆಬಾರದು
ತಳೆದರು ವಿದ್ಯೆ ಕಲಿಯಲೆ ಬಾರದು
ವಿದ್ಯೆ ಕಲಿಯೆ ಬುದ್ದಿ ಕಣ್ಣೊಂದು ತೆರೆವುದು
ವಿದ್ಯೆ ಕಲಿಯದಿರೆ ಗೋವಂದದಿ ಇರುವನು
ಮಾನಾಪಮಾನ ಮಾನವಗರಿವಾವುದು
ಜ್ಞಾನವಿಲ್ಲದ ಗೋವಿಗೆ ಸರಿಸಮರು ಅಂತ್ಯಜನರು ಗೋವು ಸರಿಸಮನೆಂದು
ಅಂತಿಹ ಭಾರತೀಯರಯ್ಯಯ್ಯೋ
ವಿದ್ಯಾ ಸಾಗರ ಅಂಬೇಡ್ಕರರು ಹೋರಾಡಿ
ಕಣ್ಮರೆಯಾದ ಹೇ ಭಗವನ್.
ಕವಿ ಇಲ್ಲಿ ಹರಿಜನರ ಬದುಕು ಅದ್ಹೇಗೆ ರೌರವ ನರಕವಾಗಿದೆ ಎಂಬುದನ್ನು ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ.
ಸೇವಿಸದಿರಿಮದ್ಯಯಿ ಎಂದಿಗೂ
ಸೇವಿಸಿದೊಡೆ ಹಾಳೆಮ್ಮೆಯ ಬಾಳುಬಿಡಿ ಭೇದಗಳೆಮ್ಮೊಳ  ಹರಿಜನರೆ |
     ಎನ್ನುವ ಮೂಲಕ ಹರಿಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶ್ರಮಿಸಿದ್ದಾರೆ. 1952 ರಲ್ಲಿ ರಚನೆಯಾದ ಇವರ 'ನಡುನೀರ ಹಡಗು' ಆರು ಅಂಕಗಳನ್ನೊಳಗೊಂಡ ನಾಟಕ ಅಂಬೇಡ್ಕರರ ವ್ಯಕ್ತಿತ್ತ್ವದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹರಿಜನರ ನ್ಯಾಯ, ತ್ಯಾಗ, ದೇಶಸೇವೆಯ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸುತ್ತದೆ.
      ಗೋವಿಂದ ದಾಸರು 'ನನ್ನ ಆತ್ಮ್ಮಚರಿತೆ' ಎಂಬುದರಲ್ಲಿ ಅವರ ಬಾಲ್ಯ, ಬೆಳವಣಿಗೆ ಸಾಗಿಬಂದ ರಹದಾರಿಯನ್ನು ಮನಮುಟ್ಟುವಂತೆ ಚಿತ್ರಸಿದ್ದಾರೆ. ಅಲ್ಲದೇ 'ಕಲಿಯುಗ ಮನು -ಡಾ. ಅಂಬೇಡ್ಕರ್' ಎಂಬ ಅಂಬೇಡ್ಕರ್ ಕುರಿತ ಜೀವನ ಚರಿತ್ರೆ ಬರೆದಿದ್ದಾರೆ.
        ಸ್ವಾತಂತ್ರ ಪೂರ್ವದಲ್ಲಿಯೆ ದಮನಿತ ಸಾಹಿತ್ಯಕ್ಕೆ ಒಂದು ನೆಲೆ ತಂದುಕೊಟ್ಟವರೆಂದರೆ ಗೋವಿಂದ ದಾಸ್ರವರು, ಆದ್ದರಿಂದಲೇ ಇವರನ್ನು ಆಧುನಿಕ  ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಕವಿ ಎಂದು ಕರೆಯುತ್ತೇವೆ. ಕಾವ್ಯ, ನಾಟಕ, ಜೀವನ ಚರಿತ್ರೆ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಮರ್ಥ ಸಾಹಿತ್ಯ ಕೊಡುವುದರ ಜೊತೆಗೆ ಮೂಲ ಜಾನಪದ ಸಂರಕ್ಷಣೆಯ ಕಾರ್ಯದಲ್ಲೂ  ತೊಡಗಿದ್ದ ಮಹಾನ್ ಚೇತನ ಗೋವಿಂದ ದಾಸ್.
      ಡಿ. ಗೋವಿಂದ ದಾಸ್ ರವರ ಸಮಗ್ರ ಸಾಹಿತ್ಯದ ಬದುಕನ್ನು ಅರಿಯ ಬೇಕಾದರೆ ಕನ್ನಡ ವಿವಿ ಹಂಪಿಯ ಪ್ರಸಾರಂಗ ಹೊರತಂದಿರುವ  ಡಾ.ಎಂ.ಎಸ್ ಶೇಖರ್ ಸಂಪಾದಕತ್ವದ 'ಡಿ. ಗೋವಿಂದಾಸ್ ಸಮಗ್ರ ಸಾಹಿತ್ಯ' ಎಂಬ ಗ್ರಂಥ ಅತ್ಯುಪಯುಕ್ತವಾಗಬಲ್ಲದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ