ಮೇ 11 ರ ವಿಶ್ವ ಮಾತೆಯರ ದಿನಾಚರಣೆ ಅಂಗವಾಗಿ ಬರೆದ ಲೇಖನ
ವಿಶ್ವ ಮಾತೆಯರೇ ನಿಮಗಿದೋ ವಂದನೇ.....
ಪ್ರೇಮ, ಪ್ರೀತಿ, ಮಮತೆ, ವಾತ್ಸಲ್ಯ, ತ್ಯಾಗ, ಅನುರಾಗ, ಅಪ್ಯಾಯತೆಗೆ ಪ್ರತಿರೂಪವೇ ಅಮ್ಮಾ. . . ಒಂಬತ್ತು ತಿಂಗಳು ಹೊತ್ತು ಕರುಳ ಕುಡಿಗೆ ಜನ್ಮ ನೀಡುವುದೆಂದರೆ ಅದು ಎಂಥ ಸಾಹಸ ಎಂಬುದು ಗೊತ್ತಿದ್ದರೂ ಅದಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧವಾಗುವ ತ್ಯಾಗಮೂರ್ತಿ ಜನನಿ.
ಮನುಷ್ಯನಿಗೆ ಸ್ವಲ್ಪ ನೋವಾದರೂ ಅವನ ಬಾಯಿಂದ ಮೊದಲು ಹೊರಬರುವ ಮಾತೇ ‘ಅಮ್ಮಾ’. ತಾನು ಹೆತ್ತ ಮುದ್ದು ಮಗುವಿನಿಂದ ಬರುವ ಅಮ್ಮ ಎಂಬ ಕರೆಗಾಗಿಯೇ ಪ್ರತಿ ತಾಯಿಯೂ ಕಾತುರದಿಂದ ಕಾಯುತ್ತಿರುತ್ತಾಳೆ. ಆ ಒಂದು ಕರೆಯಿಂದ ಸಾವಿರ ಜನ್ಮಕ್ಕಾಗುವಷ್ಟು ಆನಂದಾನುಭೂತಿಯನ್ನು ತನ್ನದಾಗಿಸಿಕೊಳ್ಳುತ್ತಾಳೆ.
ಮಾತು ಬಾರದ ಹಸುಗೂಸಿಗೆ ಏನು ಬೇಕು ಎಂಬುದನ್ನು ಗ್ರಹಿಸಿ, ಅದನ್ನು ನೀಡುವ ಸಂದರ್ಭದಲ್ಲಿ ತಾಯಿ ಒಬ್ಬ ಮಾನಸಿಕ ತಜ್ಞಳಂತೆ ಕೆಲಸ ಮಾಡುತ್ತಾಳೆ. ಅಳುವ ಕಂದನ ತಲೆ ನೇವರಿಸುತ್ತಾ ಅಭಯ ಪ್ರದಾಯಿಣಿಯಾಗಿ ನೋವನ್ನು ಹೇಳಿಕೊಳ್ಳಲಾಗದ ಮಗುವಿನ ಸಂಕಟವನ್ನು ಅರ್ಥಮಾಡಿಕೊಂಡು ಅದನ್ನು ಪರಿಹರಿಸುವ ಒಬ್ಬ ವೈದ್ಯೆಯಾಗಿ, ಪಕ್ಕದ ಮನೆಯ ಮಗುವಿನೊಂದಿಗೆ ಕಿತ್ತಾಡಿಕೊಂಡು ಜಗಳವನ್ನು ಮನೆಬಾಗಿಲಿಗೆ ತಂದಾಗ ತನ್ನ ಮಗುವಿನ ಪರ ವಕಾಲತ್ತು ವಹಿಸುವ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುವಳು ಅಮ್ಮ ಮಾತ್ರ. ಜೊತೆಗೆ ಮಗುವಿನ ತಪ್ಪು-ಸರಿಗಳ ಬಗ್ಗೆ ವಿಶ್ಲೇಷಿಸಿ ಸರಿದಾರಿಗೆ ತರುವ ಮಾರ್ಗದರ್ಶಕಿ.
ತನ್ನ ಮಗುವಿನ ಯಾವ ಅಪಾಯ ಒದಗದಂತೆ ಕಾಪಾಡುವ ಒಬ್ಬ ಸೈನಿಕಳಂತೆ, ಉಜ್ವಲ ಭವಿಷ್ಯವನ್ನು ತನ್ನ ಮಗುವಿಗೆ ದಯಪಾಲಿಸು ಎಂದು ದೇವರ ಬಳಿ ಮೊರೆಯಿಡುವವಳು ತಾಯಿ. ಪ್ರಪಂಚ ಜ್ಞಾನ ಬಂದ ತಕ್ಷಣದಿಂದ ಪ್ರಥಮ ಗುರುವಾಗಿ, ಪ್ರೀತಿ ವಾತ್ಸಲ್ಯವನ್ನು ಒಂದಾಗಿ ಬೆರೆಸಿ ಕೈ ತುತ್ತನ್ನು ತಿನ್ನಿಸುವವಳು ತಾಯಿ ಮಾತ್ರ. ಈ ಅಪೂರ್ವ ತಾಯಿ ಪ್ರೀತಿಯ ಭಾಗ್ಯ ಎಷ್ಟು ಜನರಿಗೆ ಸಿಗುತ್ತದೆ? ತಾಯಿಯ ಪ್ರೀತಿಯನ್ನೇ ಕಾಣದ ನಿರ್ಭಾಗ್ಯರೆಷ್ಟೋ ಮಂದಿ.
ನಮಗೆ ಜನ್ಮ ನೀಡುವುದರ ಜೊತೆಗೆ ಪ್ರೇಮಾನುರಾಗಗಳನ್ನು ಧಾರೆಯೆರೆಯುವ ಆ ತ್ಯಾಗಮೂರ್ತಿಗೆ ಋಣವನ್ನು ಯಾವುದರಿಂದ ತೀರಿಸಲು ಸಾಧ್ಯ? ಅಂತಹ ಮಹೋನ್ನತ ಮಾತೃಪ್ರೇಮ ಮೂರ್ತಿಗೆ ಪ್ರತಿನಿತ್ಯ ಗೌರವಾಂಜಲಿ ನೀಡುವುದರ ಹೊರತಾಗಿ, ನಮ್ಮ ಕೈಯಿಂದ ಬೇರೇನು ನೀಡಲು ಸಾಧ್ಯ?
ಯೌವನಕ್ಕೆ ಕಾಲಿಟ್ಟಾಗ ಗೆಳತಿಯಾಗಿ, ಸಂಕಷ್ಠಕ್ಕೆ ಸಿಲುಕಿದಾಗ ಆಪ್ತಳಾಗಿ, ಸಂತೋಷದ ಸಮಯದಲ್ಲಿ ವಿದೂಷಿಯಾಗಿ, ಮಮತೆ, ಅನುರಾಗಗಳನ್ನು ಹಂಚುವ ಮಹಾ ಮನುಷ್ಯಳಾಗಿ ಕಾಣಿಸಿಕೊಳ್ಳುತ್ತಾಳೆ. ತಾನು ನೀಡುವ ಸಹಾಯ, ತೋರುವ ಸಹನೆ ಮತ್ತು ಔದಾರ್ಯದಿಂದ ನಮ್ಮನ್ನು ನಾವು ಮನುಷ್ಯರನ್ನಾಗಿಸಿಕೊಳ್ಳಲು ಹೂವಿನ ಹಾದಿಗಳನ್ನು ಆಕೆ ಸೃಷ್ಠಿಸುತ್ತಾಳೆ.
ಮದುವೆ ಸಮಯದಲ್ಲಿ ಮಕ್ಕಳ ಇಷ್ಟಕ್ಕೆ ಪ್ರಾಮುಖ್ಯತೆ ನೀಡುವುದು ತಾಯಿ ಮಾತ್ರ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಏನುಬೇಕು ? ಯಾವುದು ಬೇಡ, ಯಾವುದರಿಂದ ಒಳ್ಳೆಯದಾಗುತ್ತದೆ. ಅಥವಾ ಕೆಟ್ಟದ್ದಾಗುತ್ತದೆ ಎಂದು ಮೊದಲೇ ತಿಳಿದು ಸಲಹೆ ನೀಡುವ ಆಪ್ತ ಸಲಹೆಗಾರಳು. ಪ್ರತಿಕ್ಷಣ ತನ್ನ ಮಗುವಿನ ಅಭಿವೃದ್ಧಿಗಾಗಿ ಪರಿತಪಿಸುವ ತಪಸ್ವಿ ಅವಳು. ಈ ರೀತಿಯಲ್ಲಿ ನಮಗಾಗಿ ತನ್ನ ಬದುಕನ್ನೇ ಕರಗಿಸಿಕೊಳ್ಳುತ್ತ ಮೇಣದ ಬತ್ತಿಯ ಹಾಗೆ ಮಕ್ಕಳ ಬಾಳಿಗೆ ಬೆಳಕನ್ನು ತುಂಬುವ ದಿವ್ಯ ತೇಜಸ್ವಿನಿ ತಾಯಿ. ಇಂಥ ತ್ಯಾಗಮೂರ್ತಿಗೆ ಕೃತಜ್ಞತೆ ಸಮರ್ಪಿಸಿ ಕೊಳ್ಳುವುದಕ್ಕೆ ಪ್ರತಿ ವರ್ಷ ತಾಯಿಯರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಮದರ್ಸ್ ಡೇ ಸಂಪ್ರದಾಯ ವಿದೇಶದಲ್ಲಿ ಪ್ರಾರಂಭವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ರೂಢಿಗೆ ಬರುತ್ತಿದೆ. ಈ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಮೇ ಎರಡನೇ ಭಾನುವಾರ ಮದರ್ಸ್ ಡೇ ಆಚರಿಸುವುದು ಬೆಳೆದು ಬಂದ ರೂಢಿಯಾಗಿದೆ.
ವಿದೇಶಗಳಲ್ಲಿ ಆಚರಣೆ
ಈ ದಿನಾಚರಣೆಯನ್ನು ವಿದೇಶಿ ನೆಲದಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ. ಏಷ್ಯಾ ಮೈನ್ಮಾರ್ ಪ್ರದೇಶಗಳಲ್ಲಿ ವಾಸಿಸುವ ಪ್ರಾಂತಿಯರ ಆರಾಧ್ಯ ದೈವ ‘ಸಿಬೆಲೆ’. ಆಕೆ ಆಕಾಶ ಮತ್ತು ಭೂಮಿಗೆ ಹುಟ್ಟಿದ ಮಗುವೆಂಬ ನಂಬಿಕೆ ಅವರದ್ದು.
‘ಸಿಬಿಲೆ’ ದೇವತೆ ವಿಶ್ವದಲ್ಲಿನ ಎಲ್ಲಾ ದೇವತೆಗೂ ತಾಯಿ ಎಂದು ಅವರು ಗಾಢವಾಗಿ ನಂಬಿದ್ದಾರೆ. ಆದ್ದರಿಂದಲೇ ಆ ತಾಯಿ ಹುಟ್ಟಿದ ದಿನವನ್ನು ಮದರ್ಸ್ ಡೇ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಗ್ರೀಕ್ ದೇಶದಲ್ಲಿ ‘ರಿಯಾ’ ದೇವತೆ; ರೋಮ್‍ನಲ್ಲಿ ‘ಮಗ್ನಾ ಮಾಥಾರ್’ ಅಥವಾ ‘ಗ್ರೇಟ್ ಮದರ್’ ಎಂದು ಕರೆಯಲಾಗುವ ಆ ತಾಯಿಗೆ ಅಲ್ಲಿನ ಪರ್ವತವೊಂದರ ಮೇಲೆ ಪ್ರತ್ಯೇಕ ದೇವಾಲಯ ನಿರ್ಮಿಸಿದ್ದಾರೆ.
ಪ್ರತಿವರ್ಷ ಮಾರ್ಚ್ 15 ರಿಂದ ಮೂರು ದಿನಗಳ ಕಾಲ ಅತ್ಯಂತ ವೈಭವಯುತ ಉತ್ಸವ ನಡೆಸುತ್ತಾರೆ. ಇದಕ್ಕೆ ‘ಹಿಲೇರಿಯಾ’ ಹಬ್ಬವೆಂದು ಕರೆಯುತ್ತಾರೆ. ಅಮೇರಿಕಾದಲ್ಲಿ ಪ್ರತಿವರ್ಷ ಫೆಬ್ರವರಿ ಆ ಎರಡನೇ ಭಾನುವಾರ ಲೆಬಲ್‍ನಲ್ಲಿ ವಸಂತ ಋತುವಿನ ಪ್ರಾರಂಭದ ದಿನದಂದು, ದಕ್ಷಿಣಾ ಆಫ್ರಿಕಾದಲ್ಲಿ ಮೇ ಮೊದಲನೇ ಭಾನುವಾರದಂದು ‘ಮದರ್ಸ್ ಡೇ’ ಆಚರಿಸುತ್ತಾರೆ. ಮೇ ತಿಂಗಳ ಕೊನೆಯ ಭಾನುವಾರ ಈ ಹಬ್ಬ ಆಚರಿಸುವ ಫ್ರಾನ್ಸ್ ದೇಶದವರು ಇದನ್ನು ತಮ್ಮ ಕುಟುಂಬದ ಹುಟ್ಟಿದ ದಿನವನ್ನಾಗಿ ಆಚರಿಸಿಕೊಳ್ಳುತ್ತಾರೆ. ಜಪಾನ್ ಮತ್ತು ಭಾರತದಲ್ಲಿ ಮೇ ತಿಂಗಳ ಎರಡನೇ ಭಾನುವಾರ ಈ ಸಂಭ್ರಮ ನಡೆಯುತ್ತದೆ.
ಮಾತೃ ದೇವತೆಗಳ ನಡುವೆ ಶಾಂತಿ ಸ್ನೇಹಗಳನ್ನು ವಿಕಸಿತಗೊಳಿಸಲು 19ನೆಯ ಶತಮಾನದಂಚಿನಲ್ಲಿ ಅಮೇರಿಕಾದ ಫಿಲಿಡೆಲ್ಘಿಯಲ್ಲಿನ ತಾಯಿಯೊಬ್ಬರು ಮುಂದೆ ಬಂದರು. ಅಂತರ್ಯುದ್ಧದಲ್ಲಿ ನೊಂದವರನ್ನೆಲ್ಲಾ ಒಂದೆಡೆ ಸೇರಿಸಿ ಅವರನ್ನು ಸಂತೈಸುವ ಪ್ರಯತ್ನ ಮಾಡಿದರು. ಈ ಪ್ರಯತ್ನ ನಡೆಸಿದ ಕೆಲ ದಿನಗಳಲ್ಲಿ ಆಕೆ ಇಹಲೋಕ ತ್ಯಜಿಸಿದಳು. ಕ್ರಮೇಣ ಆಕೆಯನ್ನು ಎಲ್ಲರೂ ಮರೆತು ಹೋದರು.
ಆದರೆ ಆಕೆಯ ಮಹೋನ್ನತ ಪ್ರೀತಿಯಾದರಗಳನ್ನು ಆಕೆಯ ಮಗಳು ‘ಅನ್ನಾಜಾರ್ವಿಸ್’ ಮಾತ್ರ ಮರೆಯಲಿಲ್ಲ. ತನ್ನ ತಾಯಿ ಸತ್ತ ಎರಡು ವರ್ಷಗಳ ನಂತರ ವೆಸ್ಟ್ ವರ್ಜಿನಿಯಾದಲ್ಲಿನ ಗ್ರಾಪ್ಟನ್ನಿನಲ್ಲಿ ಆಕೆ ಸಂಸ್ಕರಣೆ ಕಾರ್ಯಕ್ರಮವೊಂದನ್ನು ನಿರ್ವಹಿಸಿದರು. ಅಲ್ಲೇ ತಾಯಿಯರನ್ನು ಗೌರವಿಸುವುದಕ್ಕಾಗಿ ಅವರ ನೆನಪಿನ ದಿನವನ್ನಾಗಿ ಆಚರಿಸಲು ಸರ್ಕಾರ ಒಂದು ದಿನ ರಜಾ ಘೋಷಿಸಬೇಕೆಂದು ಮನವಿ ಮಾಡಿದರು.
ಅವರ ಪ್ರಯತ್ನದ ಫಲವಾಗಿ 1901ರಲ್ಲಿ ಪ್ರಪ್ರಥಮ ಬಾರಿಗೆ ‘ಮದರ್ಸ್ ಡೇ’ ಅಂಗೀಕರಿಸಿರುವುದಾಗಿ ವೆಸ್ಟ್ ವರ್ಜಿನಿಯಾ ಸರ್ಕಾರ ಪ್ರಕಟಿಸಿತು. ಮರು ವರ್ಷವೇ ಅಮೇರಿಕದ ಎಲ್ಲಾ ರಾಷ್ಟ್ರಗಳು ‘ಮದರ್ಸ್ ಡೇ’ಯನ್ನು ಅಧಿಕೃತವಾಗಿ ಒಪ್ಪಿಕೊಂಡು ಆ ದಿನವನ್ನು ರಜಾ ದಿನವನ್ನಾಗಿ ಘೋಷಿಸಿದರು.
1914 ರಲ್ಲಿ ಅಮೇರಿಕ ಸರ್ಕಾರ ಇದಕ್ಕೆ ಮನ್ನಣೆ ನೀಡಿತು. ಅಮೇರಿಕದ ಅಂದಿನ ಅಧ್ಯಕ್ಷ ವುಡೋ ವಿಲ್ಸನ್ ಮೇ ಎರಡನೇ ಭಾನುವಾರವನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸಿದರು. ಅದಕ್ಕಾಗಿ ಅನ್ನಾ ಜಾರ್ವಿಸ್ ಸಂತೋಷಪಟ್ಟರು.
ಆ ಸಂತೋಷ ಹೆಚ್ಚು ದಿನ ನಿಲ್ಲಲಿಲ್ಲ. ಕೆಲವು ಮಂದಿ ಮದರ್ಸ್ ಡೇಯನ್ನು ವಾಣಿಜ್ಯ ಪ್ರಯೋಜನಗಳಿಗಾಗಿ ಬಳಸಿಕೊಳ್ಳ ತೊಡಗಿದರು. ಇದನ್ನು ಸಹಿಸದ ಅವರು 1923 ರಲ್ಲಿ ‘ಮದರ್ಸ್ ಡೇ’ ಉತ್ಸವ ನಿಲ್ಲಿಸಿ ಬಿಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅದೇ ವರ್ಷ ಯಾವುದೇ ಒಂದು ಹಬ್ಬದ ಆಚರಣೆಯ ಸಮಯದಲ್ಲಿ ಒಬ್ಬ ಮಹಿಳೆ ‘ಮಾತೃದೇವೋಭವ’ ಚಿಹ್ನೆಯನ್ನು ಬಳಸಿಕೊಂಡು ಗುಲಾಭಿ ಗಿಡ ಮತ್ತು ಹೂಗಳನ್ನು ಮಾರುತಿದ್ದುದನ್ನು ತಡೆಯಲು ಹೋಗಿ ಪೋಲಿಸರಿಂದ ಬಂಧನಕ್ಕೊಳಗಾದರು!
“ನಾನು ಆಶಿಸಿದ್ದು ಇದನ್ನಲ್ಲ. ಮದರ್ಸ್ ಡೇ ಎಂದರೆ ಆ ದಿನ ತಾಯಂದಿರ ವಾತ್ಸಲ್ಯಭರಿತ ಮನೋಭಾವನೆಗಳಿಗೆ ದರ್ಪಣವಾಗಿ ನಿಲ್ಲಬೇಕು. ಅದರ ಹೆಸರಿನಲ್ಲಿ ಹಣ ಗಳಿಸುವುದನ್ನು ನಾನು ಸಹಿಸುವುದಿಲ್ಲ” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. 1948 ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಅನ್ನಾಜಾರ್ವಿಸ್ ಮರಣ ಹೊಂದಿದರು.
ಮದರ್ಸ್ ಡೇ ಆಚರಣೆಗಾಗಿ ಅನ್ನಾ ಹೋರಾಡಿ ಗೆದ್ದು ಸಾಧನೆ ಮಾಡಿದರು. ಆಕೆ ಮಾತ್ರ ಕೊನೆಯವರೆಗೂ ತಾಯಿ ಎಂದು ಕರೆಸಿಕೊಳ್ಳಲೇ ಇಲ್ಲ. ಮಕ್ಕಳಿಲ್ಲದ ಕೊರಗು ಮತ್ತು ಮದರ್ಸ್ ಡೇಯನ್ನು ವಾಣಿಜ್ಯ ಮೂಲಗಳಿಗೆ ಬಳಸಿಕೊಳ್ಳುವವರ ವಿರುದ್ಧ ಹೋರಾಡಿ ಕೃಶರಾಗಿದ್ದರು ಜಾರ್ವಿಸ್. ತಮ್ಮ ಮರಣಕ್ಕೆ ಕೆಲವು ದಿನಗಳ ಮುನ್ನ ನರ್ಸಿಂಗ್ ಹೋಂನ ಕೋಣೆಯೊಂದರಲ್ಲಿ “ನಾನು ಈ ಮದರ್ಸ್ ಡೇ ದಿನವನ್ನು ಜಾರಿಗೆ ತಂದು ತಪ್ಪು ಮಾಡಿದೆನೇನೋ ಎಂದೆನಿಸುತ್ತಿದೆ” ಎಂದು ಪತ್ರಿಕಾ ಪ್ರತಿನಿಧಿಯೊಬ್ಬರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಆದರೆ ಈಗ ಪ್ರತಿವರ್ಷ ಮದರ್ಸ್ ಡೇ ದಿನ ಅನ್ನಾ ಜಾರ್ವಿಸ್ ಮರಣಿಸಿದ ನರ್ಸಿಂಗ್ ಹೋಂನ ಆ ಕೋಣೆ ವಿಶ್ವದ ಮೂಲೆ ಮೂಲೆಗಳಿಂದ ಬರುವ ಶುಭಾಷಯ ಪತ್ರ, ಪುಷ್ಟ ಗುಚ್ಛಗಳೊಂದಿಗೆ ತುಂಬಿ ತುಳುಕುತ್ತಿರುತ್ತದೆ. ಅಮ್ಮಾ ಎಂಬ ಕಡಲಿನ ವಾತ್ಸಲ್ಯದ ಒಡಲನ್ನು ಜಗತ್ತಿಗೆ ತೋರಿಸಿಕೊಟ್ಟ ಜಾರ್ವಿಸ್ ಚಿರಸ್ಮರಣೀಯರು.
ಕೊಟ್ರೇಶ್ ಎಸ್. ಉಪ್ಪಾರ್. ಆಲೂರು
ಮೊ-9483470794
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ