ಭಾನುವಾರ, ಜೂನ್ 29, 2014

ಶಿಕ್ಷಣ ಕ್ಷೇತ್ರದಲ್ಲಿ ಡೊನೇಶನ್ ಹಾವಳಿ

    ಶಿಕ್ಷಣವೆಂಬುದು ಕೇವಲ ಮೂರಕ್ಷರದ ಪದವಲ್ಲ. ಅದೊಂದು ಮಾನವ ಜೀವನದ ಅವಿಭಾಜ್ಯ ಅಂಗ. ಇಂದಿನ ಪ್ರಸ್ತುತ ಸಮಯ ಶಿಕ್ಷಣ ಕೇಂದ್ರೀಕೃತವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. “ಶಿಕ್ಷಣವು ಮಗುವಿನಲ್ಲಿ ಅಡಗಿರುವ ಸುಪ್ತ ಚೇತನವನ್ನು ವಿಕಸಿಸುವಂತೆ ಮಾಡುವುದು” ಎಂದು ಗಾಂಧೀಜಿಯವರು ಹೇಳಿದ್ದಾರೆ . “ಶಿಕ್ಷಣವು ಮಗುವಿನಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮವನ್ನು ಹೊರಗೆಳೆಯುತ್ತದೆ” ಎಂದು ವಿವೇಕಾನಂದರು ಹೇಳಿದ್ದಾರೆ. ನಮ್ಮ ಭಾರತ ಸರ್ಕಾರವು ಪ್ರಾಥಮಿಕ ಶಿಕ್ಷಣವನ್ನು 2002ರಲ್ಲಿ ‘ಮಕ್ಕಳ ಮೂಲಭೂತ ಹಕ್ಕು ಎಂದು ಪರಿಗಣಿಸಿತು. ಇಷ್ಟು ಮಹಾನ್ ವ್ಯಾಪ್ತಿಯುಳ್ಳ ಶಿಕ್ಷಣವನ್ನು ಕೊಡಿಸಲು ಇಂದು ತಾಯ್ತಂದೆಯರು, ಪೋಷಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. “ತಮ್ಮ ಕಂದ ಒಳ್ಳೆಯ ಶಿಕ್ಷಣ ಪಡೆದು, ಮುಂದೆ ಉತ್ತಮ ವೃತ್ತಿಗಿಟ್ಟಿಸಿ, ಸಮಾಜದ ಸತ್ಪ್ರಜೆಯಾಗಿ ನೆಮ್ಮದಿಯ ಜೀವನ ಸಾಗಿಸಲಿ” ಎಂಬ ಹೆಬ್ಬಯಕೆ ಅವರದು. ಆದರೆ ಈ ಹೆಬ್ಬಯಕೆ ತಡೆಯಾಗಿ ನಿಂತಿರುವ ಹೆಬ್ಬಂಡೆ ‘ಡೊನೇಶನ್’ ಎಂಬ ಶನಿ ! ಎಂಸಿಎ, ಎಂಬಿಎ,ಮೆಡಿಕಲ್, ಇಂಜೀನಿಯರ್, ಕಂಪ್ಯೂಟರ್ ಕೋರ್ಸ್‍ಗಳಿಗೆ ಲಕ್ಷಗಟ್ಟಲೇ ತೆರಬೇಕಾಗಿದೆ. ಅಲ್ಲದೇ ಸರಕಾರಿ ಕೋಟಾದ ಸಂಸ್ಥೆಗಳಲ್ಲಿ ಸೀಟುಗಳ ದರ ನಿಗದಿಯಾಗಿರುದು ಶೋಚನೀಯ ಸಂಗತಿಯಾಗಿದೆÉ. ಡೊನೇಶನ್‍ಗೆ ಜೀವ ಕೊಟ್ಟವರು ನಾವೇ. ನಮ್ಮ ಮಕ್ಕಳು ಹೆಸರಾಂತ ಶಾಲೆ, ಕಾಲೇಜ್‍ಗಳಲ್ಲಿ ಓದಬೇಕೆಂದು ಎಷ್ಟಾದರೂ ಡೊನೇಶನ್ ಕೊಡುತ್ತೇವೆ. ಡೊನೇಶನ್ ಕೊಟ್ಟು ಖಾಸಗಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ವಿದ್ಯೇ ಒಲಿಯುತ್ತದೆಯೆ? ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿಲ್ಲವೆ? ಡೊನೇಶನ್ ಹಾವಳಿಯ ನಿರ್ಮೂಲನೆ ಸಾಧ್ಯವಿಲ್ಲದಿದ್ದರೂ ಅದನ್ನು ಒಂದು ಹತೋಟಿಗಾದರೂ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ- ಸಂಸ್ಥೆಗಳು ಕೆಲಸ ಮಾಡಬೇಕಿದೆ. ಡೊನೇಶನ್ ಕೊಟ್ಟರೆ ಶಿಕ್ಷಣ ಎಂಬ ಫಲಕವಿಲ್ಲದಿರುವುದೊಂದನ್ನು ಬಿಟ್ಟರೆ, ಈಗಿನ ಶಿಕ್ಷಣ ಪದ್ಧತಿ ಡೊನೇಶನ್ ಆಧಾರಿತವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಸೌಲಭ್ಯಗಳನ್ನು ಹೆಚ್ಚಿಸಲು ಡೊನೇಶನ್ ಅನಿವಾರ್ಯವಾಗುತ್ತದೆ. ಸರಕಾರ ಪೂರ್ಣ ಪ್ರಮಾಣದ ಅನುದಾನ ನೀಡಿದರೆ ಡೊನೇಶನ್ ಎಂಬ ಪ್ರಶ್ನೆ ಉದ್ಭವಿಸುವುದು ಕ್ಷೀಣಿಸುವುದೇನೋ ಅನಿಸುತ್ತದೆ. ಆದರೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಧನ ಸಹಾಯ ಮಾಡ ಬೇಕೆಂದರೆ ಬೊಕ್ಕಸವೇ ಸಾಲದಾಗಬಹುದು. ಈ ಪದ್ಧತಿ ಯಾರ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇದಕ್ಕೆ ಕಾರಣಗಳೇನು? ಇದರ ಪರಿಣಾಮಗಳೇನು? ಎಂಬುದರ ಬಗ್ಗೆ ಗಮನಹರಿಸೋಣ.
ಡೊನೇಶನ್ ಮತ್ತು ಬಡವರು, ವiಧ್ಯಮ ವರ್ಗದವರು
      ಡೊನೇಶನ್ ಪಿಡುಗು ಇಂದು ಶೀಕ್ಷಣವನ್ನು ಆಳುತ್ತಿದೆ. ಹಣ, ಆಸ್ತಿ ಇದ್ದರೆ ಶಿಕ್ಷಣವೆಂಬ ಮನಃಸ್ಥಿತಿ ಜನರಲ್ಲಿ ಬೇರೂರುತ್ತದೆ. ಅದರಲ್ಲೂ ಬಡವರು, ದಲಿತರು, ಮಧ್ಯಮ ವರ್ಗದವರು ಈ ಪಿಡುಗಿಗೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಣ ಕೊಟ್ಟರೆ ಶಿಕ್ಷಣವಂತರಾಗಬಹುದೆಂದು ಎಣಿಸಿ ತಮ್ಮಲ್ಲಿರುವ ಅಲ್ಪ ಸ್ವಲ್ಪ ಆಸ್ತಿಯನ್ನು ಮಾರಿ, ಜೀವನವನ್ನೇ ಬರಿದು ಮಾಡಿಕೊಳ್ಳುತ್ತಿದ್ದಾರೆ. ಸಾಲದ ಶೂಲಕ್ಕೆ ಸಿಲುಕಿ, ಆತ್ಮಹತ್ಯೆಯಲ್ಲಿ ಪರ್ಯವಸನಗೊಂಡಿರುವುದನ್ನು ನೋಡುತ್ತಲೇ ಇದ್ದೇವೆ. ಆದ್ದರಿಂದ ಈ ಜನರಿಗೆ ಶಿಕ್ಷಣ ಗಗನ ಕುಸುಮವಾಗಿದೆ. ಡೊನೇಶನ್ ಎಂಬ ಪಿಡುಗು ಪೋಷಕರಿಗಿಂದು ಒತ್ತಡ ತಂದಿದೆ. ಅವರ ಆಸೆ, ಆಕಾಂಕ್ಷೆಗಳಿಗೆ ಭಂಗ ತರಿಸಿದೆ. ಮಗುವಿಗೆ ಶಿಕ್ಷಣ ಕೊಡಿಸಲು ತಮ್ಮ ಶಕ್ತಿಮೀರಿ ಪ್ರಯತ್ನಿಸಿ, ಹತಾಶರಾಗುವಂತೆ ಮಾಡಿದೆ. ಶಿಕ್ಷಣ ಎಂಬ ಪದ ವ್ಯಕ್ತಿಯ ಜ್ಞಾನ ವಿಕಾಸ ಮಾಡುವ ಬದಲು ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟು ಶೋಷಣೆ ಮಾಡುವ ಸಂಗತಿಯಾಗಿ ಬೆಳವಣಿಗೆ ಕಾಣುತ್ತಿರುವುದು ವಿಷಾದನೀಯ. ಇಂದು ಮುಗ್ಧ ಮಕ್ಕಳ ಭವಿಷ್ಯ ಡೊನೇಶನ್ ಎಂಬ  ಬುಲ್ಡೋಜರ್ ಅಡಿಗೆ ಸಿಲುಕಿ ಅಪ್ಪಚ್ಚಿಯಾಗಿ ಕಮರಿ ಹೋಗಿದೆ. ಇವರು ಭವ್ಯ ಭಾರತದ ಸತ್ಪ್ರಜೆಯಾಗುವ ಬದಲಾಗಿ ಸತ್ತ ಪ್ರಜೆಗಳಾಗಿ ಬಳಲಿ ಬೆಂಡಾಗಿದ್ದಾರೆ. ಈ ಪಿಡುಗಿನಿಂದ ಒಂದು ಕುಟುಂಬ ಮಾತ್ರವಲ್ಲ, ಇಡೀ ಸಮಾಜವೇ ನುಜ್ಜು ಗುಜ್ಜಾಗುತ್ತಿದೆ. ಶಿಕ್ಷಣವು ಉಳ್ಳವರ ಸ್ವತ್ತಾಗಿರುವುದು ಬಡವರ ಆಸೆಗಳನ್ನೆಲ್ಲಾ ಕಮರಿಸಿದೆ.
ಡೊನೇಶನ್ ಮತ್ತು ಹಳ್ಳಿಗರು :
     ಹಳ್ಳಿಗರು ತಮ್ಮ ಮಕ್ಕಳನ್ನು ಜ್ಞಾನವಂತರಾಗಿ, ಉತ್ತಮ ಶಿಕ್ಷಿತರನ್ನಾಗಿ ಮಾಡಲು  ಆಶಾಭಾವನೆ ತುಂಬಿಕೊಂಡಿರುತ್ತಾರೆ. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ತಮ್ಮ ಆಸೆಗಳಿಗೆ ತಣ್ಣಿರೆರಚಿಕೊಂಡು ಹಳ್ಳಿಗಳಲ್ಲೇ ಕೊನೆಯುಸಿರೆಳೆಯಬೇಕಾಗುತ್ತದೆ. ಆದರೂ ಶಕ್ತಿ ಮೀರಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕಾದರೆ ತಮಗಿರುವ ಗದ್ದೆ, ಜಮೀನು, ಮನೆ, ಹೆಂಡತಿಯ ಆಭರಣಗಳನ್ನೋ ಅಥವಾ ತಾಳಿ, ಕಾಲುಂಗುರ, ಒಡವೆಗಳನ್ನು ಅಡವಿಟ್ಟು ಅಥವಾ ಮಾರಿಯೋ ಒಂದು ದಾರಿ ತೋರಬೇಕಿದೆ. ಇದರಿಂದ ಹಳ್ಳಿಗರ ಆಸಕ್ತಿ ಕುಂದಿ, ಹಿಂದುಳಿಯಲು ಖಾಸಗಿ ಶಿಕ್ಷಣ ಸಂಸ್ಥೆಗಳು ನೇರವಾಗಿ ಹೊಣೆಯಾಗಿವೆ.
ಡೊನೇಶನ್ ಹಾಗೂ ಸರ್ಕಾರಿ ಶಾಲೆಗಳು :
      ಡೊನೇಶನ್ ಎಂಬ ಪಿಡುಗು ಖಾಸಗಿ ಸಂಸ್ಥೆಗಳಿಗೆ ಸಂಬಂಧಪಟ್ಟರೂ, ಸರ್ಕಾರಿ ಶಾಲೆಗಳ ಮೇಲೂ ತನ್ನ ಪ್ರಭಾವ ಬೀರಿದೆ. ಉತ್ತಮ ಶಿಕ್ಷಣ, ಹೆಸರಾಂತ ಶಾಲಾ ಕಾಲೇಜ್‍ಗಳಲ್ಲಿ ಮಾತ್ರ ! ಎಂಬ ಮೌಢ್ಯತೆಗೆ ಶರಣಾದ ನಮ್ಮಂತಹ ಪೋಷಕ ವರ್ಗ ಡೊನೇಶನ್ ಎಂಬ ಸಂಸ್ಥೆಗಳ ಶಿಕ್ಷಣಕ್ಕೆ ಮಾರು ಹೋಗಿದ್ದೇವÉ. ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೆಳೆದುಬಿಟ್ಟಿದೆ. ಇದರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಮಾನಸಿಕವಾಗಿ ಬೆಂದು ಹೋಗಿರುವುದಲ್ಲದೇ, ಅವರ ಆತ್ಮವನ್ನು ಕುಗ್ಗಿಸಿದೆ. ಆದರೆ ಕೊನೆಗೂ ಸರ್ಕಾರಿ ಶಾಲೆಗಳೇ ಬಡವರ, ಹಳ್ಳಿಗರ ನಿಜವಾದ ವಿದ್ಯಾ ಮಂದಿರಗಳಾಗಿವೆ ಎನ್ನಬಹುದು.
ಡೊನೇಶನ್ ಪಿಡುಗಿಗೆ ಕಾರಣಗಳು :
    ಡೊನೇಶನ್ ಎಂಬ ಪಿಡುಗು ಜನ್ಮತಾಳಿ ಸಮಾಜವನ್ನೇ ಜೀವಸಹಿತ ಸುಡುವ ಜ್ವಾಲೆಯಾಗಿದೆ. ಈ ಜ್ವಾಲೆ ಉದ್ಭವಿಸಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳು :
    ಹಣವಿಲ್ಲದೇ ಇಂದು ಯಾವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ನೀಡುತ್ತಿಲ್ಲ. ಎಲ್‍ಕೆಜಿಯಿಂದ ಬಿ.ಎಡ್. ವರೆಗೂ ಹಾಗೂ ವೈದ್ಯಕೀಯ, ಎಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣದವರೆಗೂ ಕಿತ್ತು ತಿನ್ನುವ ಬಕಪಕ್ಷಿಗಳೇ ಅಧಿಕವಾಗಿವೆ. ವಿದ್ಯಾರ್ಥಿ, ಬುದ್ದಿವಂತನೋ, ಬಡವನೋ, ಬಲ್ಲ್ಲಿದನೋ ಎಂದು ಪರಾಮರ್ಶಿಸದೇ ಇಲ್ಲಿ ಹಣವೇ ಸಿಂಹಾಸನದ ಮೇಲಿರುವ ಅಗ್ರಜ ! ಕೆಲವೊಂದು ಗುಣಾತ್ಮಕ ಶಿಕ್ಷಣ ನೀಡುತ್ತವಾದರೂ ಇದನ್ನೇ ಪ್ರಚಾರವಾಗಿರಿಸಿಕೊಂಡು ಅಗಾದ  ಹಣವನ್ನು ಸಂಗ್ರಹಿಸುವ ಪ್ರವೃತ್ತಿ ಬೆಳೆಸಿಕೊಂಡಿವೆ.
ಪೋಷಕರ ಅಂತಸ್ತಿನ ತೋರ್ಪಡಿಕೆ :
    ಪೋಷಕರು ಸಿರಿವಂತ ಮನೆತನದಿಂದ ಬಂದವರಾಗಿದ್ದರೆ ತಮ್ಮ ಮಕ್ಕಳನ್ನು ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸಲು ಹಾತೊರೆಯುತ್ತಾರೆ. ಅಧಿಕ ಡೊನೇಶನ್ ಎಲ್ಲಿರುವುದೋ ಅಲ್ಲಿ ಸೇರಿಸುವುದು ಇವರಿಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ತಮ್ಮ ಅಂತಸ್ತನ್ನು ಜನರು ನೋಡಿ ಕೊಂಡಾಡಲಿ ಎಂಬ ಒಣ ಹೆಮ್ಮೆಯಿಂದ ಜಂಬದ ಕೋಳಿಯಂತಹ ಸಿರಿವಂತ ಪೋಷಕರು ಡೊನೇಶನ್ ನೀಡುತ್ತಾರೆ.

ಮಕ್ಕಳಿಂದ ಅತಿಯಾದ ಜ್ಞಾನ ಭರವಸೆಯ ನಿರೀಕ್ಷೆ ಃ
    ಪೋಷಕರು ತಮ್ಮ ಮಕ್ಕಳು ಬೇರೆಯವರ ಮಕ್ಕಳಿಗಿಂತ ಭಿನ್ನವಾಗಿರಬೇಕು, ಅಧಿಕ ಜಾಣರಿರಬೇಕು, ಹೆಚ್ಚು ಅಂಕ ಗಳಿಸಬೇಕು ಎಂದು ಅಭಿಲಾಷೆ ಹೊಂದಿರುತ್ತಾರೆ. ಆದಕಾರಣ ಹೆಸರಾಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟೇ ಹಣವಾದರೂ ಸೀಟು ಕೊಡಿಸಲು ಕೈಮೀರಿ ಪ್ರಯತ್ನ ಪಡುತ್ತಾರೆ. ಸಾಲವೋ ಸೋಲವೋ ಮಾಡಿ ಕೇಳಿದಷ್ಟು ಹಣ ನೀಡಿ ಸ್ವರ್ಗದ ಬಾಗಿಲೇರಿದಂತೆ ಬಾಸಹೊಂದುತ್ತಾರೆ.
ಸರ್ಕಾರಿ  ಶಾಲೆಗಳ ದುರಾಡಳಿತ :
    ಖಾಸಗಿ ಶಾಲೆಗಳೊಂದಿಗೆ ನಮ್ಮ ಕೆಲವು ಸರ್ಕಾರಿ ಶಾಲೆಗಳನ್ನು ಹೋಲಿಸಲು ಪ್ರಯತ್ನಸಿದಾಗ ಅಲ್ಲಿ ಸೌಲಭ್ಯಗಳ ಕೊರತೆ ಗೋಚರವಾಗುತ್ತದೆ. ಜೊತೆಗೆ ಅಶಿಸ್ತು, ಬೇಜವಾಬ್ದಾರಿತನ ತಾಂಡವವಾಡುತ್ತದೆ. ಗ್ರಂಥಾಲಯ, ವಾಚನಾಲಯ, ಪ್ರಯೋಗಾಲಯ, ಶೌಚಾಲಯ ಹೀಗೆ ಅನೇಕ ರೀತಿಯ ಸಮಸ್ಯೆಗಳು ಕಾಣ ಸಿಗುತ್ತವೆ. ಇವೆಲ್ಲಾ ಕಾರಣಗಳಿಂದ ಪೋಷಕರಿಗೆ ಸರ್ಕಾರಿ ಶಾಲೆಗಳ ಮೇಲೆ ತಾತ್ಸಾರ ಮನೋಭಾವನೆ ಮೂಡಲು ಎಡೆಮಾಡಿಕೊಡುತ್ತದೆ. ಕೆಲವೊಂದು ಶಾಲೆಗಳು ಇದರ ಹೊರತಾಗಿಯೂ ಅತ್ಯಾಕರ್ಷಣೆಯಾಗಿವೆ. ಆದರೆ ಬಹುತೇಕರುÀ ಎಷ್ಟೇ ಹಣವಾದರೂ ಸರಿ, ಡೊನೇಶನ್ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಲು ಪ್ರಯತ್ನಿಸುತ್ತಾರೆ. ಈ ತೆರನಾಗಿ ಹಲವಾರು ಕಾರಣಗಳನ್ನು ಡೊನೇಶನ್ ಪದ್ಧತಿಯಲ್ಲಿ ದಿನನಿತ್ಯ ಕಾಣುತ್ತೇವೆ. ಇದರಿಂದ ಪೋಷಕರು, ವಿದ್ಯಾರ್ಥಿಗಳು ಹಳ್ಳಿಗರು, ಬಡವರು, ದಲಿತ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಸಮಾನತೆ ಅಧಿಕ ಅಂತರವನ್ನು ಪಡೆಯುತ್ತದೆ.
ನಿವಾರಣಾ ಕ್ರಮಗಳು :
     ಈ ಡೊನೇಶನ್ ಎಂಬ ಭೀಕರ ರೋಗವನ್ನು ಬೇರುಸಹಿತ ಕಿತ್ತು ಹಾಕುವ ಶಕ್ತಿ ಸರ್ಕಾರಕ್ಕಿದೆ. ಖಾಸಗಿ ಶಾಲಾ ಕಾಲೇಜಿನ ಆಡಳಿತ ಕ್ರಮವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಡೊನೇಶನ್ ತೆಗೆದುಕೊಂಡು ಪ್ರವೇಶ ನೀಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಯಾವುದೇ ರೀತಿಯಲ್ಲಿ ಸರ್ಕಾರ ಅನುಕೂಲಕರ ಸಹಾಯವನ್ನು ಕಡಿತಗೊಳಿಸಬೇಕು. ಸಾಧ್ಯವಾದರೆ ಮಾನ್ಯತೆಯನ್ನು ರದ್ದುಗೊಳಿಸಬೇಕು. ಆದರೆ ಸಮಾಜಪರ ಚಿಂತನೆಗಳನ್ಹೊಂದಿದ ಸಂಸ್ಥೆಗಳಿಗೆ ಅಗತ್ಯ ಸಹಾಯವನ್ನೂ ಮಾಡಬೇಕಾಗುತ್ತದೆ. ಈ ಡೊನೇಶನ್ ರೋಗವನ್ನು ಪರಿಶೀಲಿಸಲು ರಾಜ್ಯಮಟ್ಟದಲ್ಲಿ ತನಿಖಾ ದಳಗಳನ್ನು ರೂಪಿಸಿ, ರಾಜ್ಯಾದ್ಯಂತ ಶಿಷ್ಟಾಚಾರದಿಂದ ಕರ್ತವ್ಯ ನಿರ್ವಹಿಸಲಿ. ಜೊತೆಗೆ ಸರ್ಕಾರ ತನ್ನ ಸರ್ಕಾರಿ ಶಾಲೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಸೌಲಭ್ಯಗಳನ್ನು ದೊರಕಿಸಬೇಕು.
ಪೋಷಕರ ಪಾತ್ರ :
     ಕೊಡುವವರು ಅಧಿಕಗೊಂಡಾಗ ಸ್ವೀಕರಿಸುವವರು ಬೆಲೆ ಹೆಚ್ಚಿಸುತ್ತಾ ಸಾಗುತ್ತಾರೆ. ಪೋಷಕರೆಲ್ಲಾ ಪ್ರವೇಶಗಳು ಮನೆಬಾಗಿಲಿಗೆ ಬರುತ್ತವೆ. ಸಿರಿವಂತರು ತಮ್ಮ ಅಂತಸ್ಥನ್ನು ತೊರೆದು ಸರ್ಕಾರಿ ಶಾಲೆಗಳ ಕಡೆಗೆ ಗಮನಹರಿಸಿದರೆ ಡೊನೇಶನ್ ಎಂಬ ಪಿಡುಗು ತಾನಾಗಿಯೇ ನಾಶದತ್ತ ಸಾಗುವುದರಲ್ಲಿ ಎರಡು ಮಾತಿಲ್ಲ ! ಇದರ ಹಿನ್ನಲೆಯಲ್ಲಿ ಪೋಷಕ ಸಮುದಾಯ ಇಂತಹ ಶಿಕ್ಷಣ ಸಂಸ್ಥೆಗಳ ಮೇಲೆ ರೊಚ್ಚಿಗೆದ್ದು ಡೊನೇಶನ್ ಪದ್ಧತಿ ರದ್ದುಗೊಳಿಸುವಂತೆ ಸರ್ಕಾರದ ವಿರುದ್ಧ ಹೋರಾಡಬೇಕಿದೆ.
ಸರ್ಕಾರಿ ಶಾಲಾ ಶಿಕ್ಷಕರ ಪಾತ್ರ :
     ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಇಷ್ಟರಮಟ್ಟಗೆ ತಲೆಯತ್ತಿ ನಿಲ್ಲಲು ಒಂದು ರೀತಿಯಲ್ಲಿ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರು ನೇರವಾಗಿ ಹೊಣೆಯಾಗುತ್ತಾರೆ. ಏಕೆಂದರೆ ಸರ್ಕಾರ ಕೋಟಿಗಟ್ಟಲೇ ಹಣ ಸುರಿದು ತರಬೇತಿಗಳನ್ನು ಇನ್ನಿತರ ಸೌಲಭ್ಯಗಳನ್ನು ಒದಗಿಸಿದರೂ ಶಿಕ್ಷಕರು ದಕ್ಷತೆಯಿಂದ ಕಾರ್ಯ ನಿರ್ವಹಿಸದಿರುವುದು ಶೋಚನೀಯ ಸಂಗತಿಯಾಗಿದೆ. ಪ್ರಾಮಾಣಿಕತೆ, ಆಸಕ್ತಿ, ಆಕರ್ಷಣೀಯ ಬೋಧನೆಗಳು ಇಲ್ಲವಾಗಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕನು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕನು ಈ ಮೇಲಿನ ಅಂಶಗಳನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದೇ ಆದರೆ ಮತ್ತೆ ಸರ್ಕಾರಿ ಶಾಲೆಗಳು ಉನ್ನತ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಲು ಸಂದೇಹವೇ ಇಲ್ಲ. ಆಗ ಮಾತ್ರ ಖಂಡಿತ ಡೊನೇಶನ್ ಎಂಬ ಪೀಡೆಯನ್ನು ಓಡಿಸಲು ಸಾಧ್ಯವಾಗುತ್ತದೆ.


ಕೊಟ್ರೇಶ್ ಎಸ್. ಉಪ್ಪಾರ್,ಆಲೂರು.
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9739878197












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ