ಶುಕ್ರವಾರ, ನವೆಂಬರ್ 7, 2014

ಭಾರತದ ಪ್ರಥಮ ‘ನೊಬೆಲ್’ ವಿಜ್ಞಾನಿ ಸರ್.ಸಿ.ವಿ. ರಾಮನ್ - ಕೊಟ್ರೇಶ್ ಎಸ್. ಉಪ್ಪಾರ್


     ಆಧುನಿಕವಾಗಿ ಭಾರತ ವಿಶ್ವಪಂಕ್ತಿಯಲ್ಲಿ ಪ್ರಜ್ವಲಿಸಲು ಕಾರಣವಾದದ್ದು ‘ರಾಮನ್ ಪರಿಣಾಮ’. ಇದು ಜಾಗತಿಕ ವಿಜ್ಞಾನ ಲೋಕದಲ್ಲಿ ಮೈಲುಗಲ್ಲಾಯಿತು. ಇದಕ್ಕೆಲ್ಲಾ ಕಾರಣ ಭಾರತದ ಹೆಸರಾಂತ ವಿಜ್ಞಾನಿ ಡಾ ಸರ್.ಸಿ.ವಿ. ರಾಮನ್’ ರವರು. ‘ಚಂದ್ರಶೇಖರ್ ವೆಂಕಟರಾಮನ್ ಇದು ಅವರ ಪೂರ್ಣ ಹೆಸರು.
    ಇವರು 1888 ನವಂಬರ್ 07 ರಂದು ತಮಿಳುನಾಡಿನ ‘ತಿರುಚಿನಾಪಳ್ಳಿ' ಸಮೀಪದ ‘ತಿರುವನೈಕಾವಲ್' ಎಂಬ ಊರಿನ ಶ್ರೀ ಚಂದ್ರಶೇಖರ್ ಹಾಗೂ ಶ್ರೀಮತಿ ಪಾರ್ವತಿ ಅಮ್ಮಾಳ್ ದಂಪತಿಗಳ ಪುಣ್ಯ ಗರ್ಭಾಂಬುದಿಯಲ್ಲಿ ಜನಿಸಿದರು. ಚಂದ್ರಶೇಖರ್ ರವರು ಭೌತಶಾಸ್ತ್ರ ಪ್ರಧ್ಯಾಪಕರಾಗಿದ್ದರು. ಇವರದು ಅವಿಭಕ್ತ ಕುಟುಂಬವಾದ್ದರಿಂದ ಜೀವನ ಅಷ್ಟೊಂದು ಸುಸ್ಥಿತಿಯಲ್ಲಿರಲಿಲ್ಲ. ‘ರಾಮನ್' ಅವರ ತುಡಿತ, ಮನೋಕಾಂಕ್ಷೆಗಳಿಗೆ ತಕ್ಕಂತಹ ಶೈಕ್ಷಣಿಕ ಸೌಕರ್ಯಗಳನ್ನು
    ಪೂರೈಸುವ ಶಕ್ತಿ ಕುಟುಂಬಕ್ಕಿರಲಿಲ್ಲ, ಚಿಕ್ಕವಯಸ್ಸಿನಲ್ಲಿಯೇ ಜ್ಞಾನದಾಹಿಯಾಗಿದ್ದ ‘ರಾಮನ್' ಬಡತನದಲ್ಲಿಯೇ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರು. ತಮ್ಮ 12ನೆಯ ವಯಸ್ಸಿಗೆ ‘ಮೆಟ್ರಿಕ್ಯೂಲೇಶನ್' ಮುಗಿಸಿದರು. ಇವರ ಆಸಕ್ತಿ ಕಂಡ ತಂದೆ ಚಂದ್ರಶೇಖರ್ ರವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎಸ್ಸಿಗೆ ಸೇರಿಸಿದರು. ತಂದೆಯ ಆಶೋತ್ತರಗಳಂತೆ ‘ರಾಮನ್' 1904 ಬಿ.ಎಸ್ಸಿ, 1907 ರಲ್ಲಿ ಎಂ. ಎಸ್ಸಿ ಪದವಿಗಳನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಇವರಿಗೆ ವೈಜ್ಞಾನಿಕ ಅದರಲ್ಲೂ ಭೌತಶಾಸ್ತ್ರದ ಪ್ರಯೋಗಗಳಲ್ಲಿ ಎಲ್ಲಿಲ್ಲದ ಆಸಕ್ತಿ. ವಿದ್ಯಾಭ್ಯಾಸ ಪೂರೈಸಿದ ನಂತರವೂ ಅವರ ಮನಸ್ಸು ನವ-ನವೀನ ಆವಿಷ್ಕಾರಗಳತ್ತ ತುಡಿಯುತ್ತಲಿತ್ತು. ಯಾವುದೋ ಹೊಸತನಕ್ಕೆ ಹಂಬಲಿಸುತ್ತಿತ್ತು.
   1907 ರಲ್ಲಿ ನಡೆದ ‘ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ' ಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತಾದಲ್ಲಿ 'ಡೆಪ್ಯೂಟಿ ಅಕೌಂಟೆಂಟ್ ಜನರಲ್' ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆದರೂ ಇವರ ಭೌತಶಾಸ್ತ್ರದ ಅಧ್ಯಯನದ ಕಡೆಗೆ ತುಡಿಯುತ್ತಲಿತ್ತು. ಇವರಿಗೆ ಸಂಶೋಧನೆ ಮಾಡಲು ಸಮಯವಕಾಶದ ತೊಂದರೆಯೂ ಆಯಿತು. ವೃತ್ತಿ ಹಾಗೂ ಪ್ರವೃತ್ತಿಗಳೆರಡೂ ಭಿನ್ನವಾಗಿ ಕೆಲಕಾಲ ಮೌನ ತಾಳಿದ ‘ರಾಮನ್' ಅವರು 1917 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು. ಇದುವೇ ಅವರ ಬದುಕಿನ ದಿಕ್ಕನ್ನು ಬದಲಿಸಿದ ಕಾಲ ಘಟ್ಟವೆನ್ನಬಹುದು. ಅಲ್ಲಿಗೆ ಅವರ ವೃತ್ತಿ, ಪ್ರವೃತ್ತಿಗಳೆರಡೂ ಸಂಗಮವಾದವು. ಮುಂದೆ 1924 ರಲ್ಲಿ ‘ಲಂಡನ್ನಿನ ಫೆಲೋ ಆಫ್ ರಾಯಲ್ ಸೊಸೈಟಿಗೆ ರಾಮನ್ ಆಯ್ಕೆಯಾದರು. ಈ ಅವಕಾಶ ಅವರ ಆವಿಷ್ಕಾರದ ಹೆಬ್ಬಾಗಿಲನ್ನು ತೆರೆಯಿತು.
      ಸತತ ಮೂರ್ನಾಲ್ಕು ವರ್ಷಗಳು ಸಂಶೋಧನೆಯ ಆಳಕ್ಕೆ ಇಳಿದ ರಾಮನ್‍ರಿಗೆ ಕಾಡಿದ್ದು ‘ಆಕಾಶದ ನೀಲಿಬಣ್ಣ ಅವರನ್ನು ಸ್ಥಬ್ದರನ್ನಾಗಿ ಮಾಡಿತ್ತು, ಅದು ಹೇಗೆ ಸಾಧ್ಯ? ಎಂಬ ಪ್ರಶ್ನೆ! ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಂಡ ಕಡಲಿನ ನೀಲಿ ಬಣ್ಣದ ಕಾರಣವನ್ನು ತಿಳಿಯಲು ಸಾಕಷ್ಟು ಪ್ರಯೋಗ ಮಾಡಿದರು. ಆಕಾಶದ ನೀಲಿ ಬಣ್ಣ, ಹಾಗೆಯೇ ಬಗೆಬಗೆಯ ಹೂಗಳ ಬಣ್ಣಗಳಿಂದಲೂ ಆಶ್ಚರ್ಯ ಚಕಿತರಾದ ಅವರು ಈ ವಿಸ್ಮಯವನ್ನು ಕಂಡು ಹಿಡಿಯಲು ಪಣತೊಟ್ಟರು.
      ಸುದೀರ್ಘವಾದ ಅಧ್ಯಯನದಾಳಕ್ಕಿಳಿದ ರಾಮನ್ ವಾತಾವರಣದಲ್ಲಿರುವ ಧೂಳಿನ ಕಣಗಳು ಭಾಗಶಃ ಚದುರುವಿಕೆಯಿಂದ ಅದರ ಎಲ್ಲಾ ಬಣ್ಣಗಳು ಚದುರುವವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯ ಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು, ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುವುದು, ಎನ್ನುವ ವಿಚಾರ ಬೆಳಕಿಗೆ ಬಂದಿತು.
     1928 ರ ಫೆಬ್ರವರಿ 28 ರಂದು ಈ ಸಂಶೊಧನೆಯ ವರದಿಯನ್ನು ‘ರಾಮನ್ ಎಫೆಕ್ಟ್' ಎಂಬ ಹೆಸರಲ್ಲಿ ಜಾಗತಿಕವಾಗಿ ಸ್ವತಃ ರಾಮನ್ ಬಹಿರಂಗ ಪಡಿಸಿದರು. ನಂತರ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಸಂಪೂರ್ಣ ವಿವರವನ್ನು ಪ್ರಸ್ತುತ ಪಡಿಸಿದರು.
     ‘ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ' ಎಂದು ಧೃಡಪಡಿಸಿದರು. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಪ್ರತಿವರ್ಷ ಫೆಬ್ರವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಇಂದಿಗೂ ಆಚರಿಸುತ್ತಿದ್ದೇವೆ. ಈ ಅಪರೂಪದ ಆವಿಷ್ಕಾರ ಗಮನಿಸಿದ ವಿಶ್ವ ವಿಜ್ಞಾನ ಸಂಸ್ಥೆ 1930 ರಲ್ಲಿ ರಾಮನ್‍ರ ‘ರಾಮನ್ ಎಫೆಕ್ಟ್' ಸಂಶೋಧನೆಗೆ ಪ್ರತಿಷ್ಠಿತ ನೊಬೆಲ್  ಪ್ರಶಸ್ತಿ ಘೋಷಿಸಿತು. ಈ ಮೂಲಕ ರಾಮನ್ ಅವರು ಭಾರತಕ್ಕೆ ವಿಜ್ಞಾನ ವಿಭಾಗದಲ್ಲಿ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಗೆ ಭಾಜನರಾದರು.
     ಬಾಲ್ಯದಿಂದಲೂ ಭೌತಶಾಸ್ತ್ರದಲ್ಲಿ ಎಲ್ಲಿಲ್ಲದ ಆಸಕ್ತಿ ಹೊಂದಿದ್ದ ರಾಮನ್ ಅದೇ ವಿಷಯದಲ್ಲಿ ಜಗತ್ತು ತನ್ನೆಡೆಗೆ ನೋಡುವಂತೆ ಮಾಡಿದ್ದು ಅತ್ಯದ್ಬುತ ಸಾಧನೆ.
    1934 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತೀಯರಲ್ಲಿ ಸಂಶೋಧನಾ ಮನೋಪ್ರವೃತ್ತಿಗಳನ್ನು ಅಭಿವೃದ್ದಿಪಡಿಸಲು ಬಹಳ ಶ್ರಮವಹಿಸಿದರು. ತದನಂತರ 1943 ರಲ್ಲಿ ‘ರಾಮನ್' ಸಂಶೋಧನಾ ಕೇಂದ್ರ'ವನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಿದರು.
     ಬಾಲ್ಯ ಹಾಗೂ ಶಿಕ್ಷಣವನ್ನು ತಮಿಳುನಾಡಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ವೃತ್ತಿಯನ್ನು ಆರಂಭಿಸಿ, ಸಂಶೋಧನೆಯನ್ನು ಕರ್ನಾಟಕದಲ್ಲಿ ಮಾಡಿದ ಅವರು ಬೆಂಗಳೂರನ್ನು ಆವಿಷ್ಕಾರದ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡರು. ಅವರು ಭಾವಿ ಸಂಶೋಧಕರಿಗಾಗಿಯೇ ಸ್ಥಾಪಿಸಿದ ಈ ಸಂಸ್ಥೆ ಅನೇಕ ವಿಜ್ಞಾನಿಗಳನ್ನು ನೀಡಿದೆ. ಸಿ.ವಿ. ರಾಮನ್ ಅವರ ಇನ್ನೊಂದು ಅಭೂತ ಪೂರ್ವ ಕೊಡುಗೆ ಎಂದರೆ ‘ಸ್ಟ್ರೊಕ್ಟ್ರೋಸ್ಕೊಪಿ'.
ಇವರ ಅವಿಸ್ಮರಣಿಯ ಸಂಶೋಧನೆಗಳಿಗಾಗಿ ಹಲವಾರು ಗೌರವ ಪುಸ್ಕಾರಗಳು ದೊರೆತಿವೆ.
1. 1924 ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ
2. 1929 ರಲ್ಲಿ ‘ನೈಟ್ ಹುಡ್' ಪ್ರಶಸ್ತಿ
3. 1930 ರಲ್ಲಿ ಪ್ರತಿಷ್ಟಿತ ‘ನೊಬೆಲ್ ಪ್ರಶಸ್ತಿ'
4. 1935 ರಲ್ಲಿ ಮೈಸೂರು ಮಹಾರಾಜರಿಂ 'ರಾಜ ಸಭಾ ಭೂಷಣ ಗೌರವ'
5. 1954 ರಲ್ಲಿ ‘ಭಾರತ ರತ್ನ ಪ್ರಶಸ್ತಿ' ಪ್ರಮುಖವಾದವುಗಳು.
ಭಾರತೀಯಕ್ಕಷ್ಟೇ ಮೀಸಲಾಗದೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಧೃವತಾರೆಯಾಗಿ ಪ್ರಜ್ವಲಿಸಿದ ಡಾ|| ಸರ್.ಸಿ.ವಿ ರಾಮನ್‍ರ ಕೊಡುಗೆ ಅಪಾರ, ಅನನ್ಯ. ಅವರ ಆವಿಷ್ಕಾರಗಳು ಸಾವಿರಾರು ಯುವ ವಿಜ್ಞಾನಿಗಳಿಗೆ ದಾರಿ ದೀಪಗಳಾಗಿವೆ. ಇಂತಹ ಒಂದು ಅಮೂಲ್ಯ ರತ್ನ 1970 ನವೆಂಬರ್ 20 ರಂದು ಬೆಂಗಳೂರಿನಲ್ಲಿ ಇನ್ನಿಲ್ಲವಾಯಿತು.

ಕೊಟ್ರೇಶ್ ಎಸ್. ಉಪ್ಪಾರ್, 
ಭಾಷಾ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಳೂರು
ಆಲೂರು ತಾ||, ಹಾಸನ ಜಿ||
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ